ಆಸ್ಟ್ರೇಲಿಯದಲ್ಲಿ ಆಸ್ಪತ್ರೆಗೆ ದಾಖಲಾದ ಪಾಕಿಸ್ತಾನ ಸ್ಪಿನ್ನರ್ ನೋಮಾನ್ ಅಲಿ, ಸರಣಿಯಿಂದ ಹೊರಕ್ಕೆ

Photo : twitter
ಮೆಲ್ಬೋರ್ನ್: ಆಸ್ಟ್ರೇಲಿಯ ವಿರುದ್ಧ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದ ಪಾಕಿಸ್ತಾನದ ಸ್ಪಿನ್ನರ್ ನೋಮಾನ್ ಅಲಿ ತೀವ್ರ ಅಪೆಂಡಿಕ್ಸ್ನಿಂದಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಪರ್ತ್ನಲ್ಲಿ ಪಾಕಿಸ್ತಾನವು ಹೀನಾಯವಾಗಿ ಸೋತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆಯದ 37 ವರ್ಷದ ಅಲಿಗೆ ಶುಕ್ರವಾರ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ನೋಮಾನ್ ಅಲಿಗೆ ನಿನ್ನೆ ಹಠಾತ್ ಹಾಗೂ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಸ್ಕ್ಯಾನಿಂಗ್ ನಡೆಸಲಾಯಿತು. ಈ ವೇಳೆ ಅಪೆಂಡಿಕ್ಸ್ ಇರುವುದು ಗೊತ್ತಾಯಿತು. ಶಸ್ತ್ರಚಿಕಿತ್ಸಕರ ಸಲಹೆಯ ಮೇರೆಗೆ ಅವರು ಇಂದು ಸರ್ಜರಿಗೆ ಒಳಗಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಮುಂದಿನ ವಾರ ಮೆಲ್ಬೋರ್ನ್ನಲ್ಲಿ ಆರಂಭವಾಗಲಿರುವ ದ್ವಿತೀಯ ಪಂದ್ಯ ಸೇರಿದಂತೆ ಸರಣಿಯ ಇನ್ನುಳಿದ 2 ಪಂದ್ಯಗಳಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಿಳಿಸಿದೆ.
ಅಲಿ ಪಾಕ್ ಪರ 15 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಪಂದ್ಯ ಆಡಿದ್ದರು.
ವೇಗದ ಬೌಲರ್ ಖುರ್ರಮ್ ಶಹಝಾದ್ ಗುರುವಾರ ಸರಣಿಯಿಂದ ಹೊರಗುಳಿದ ನಂತರ ಪಾಕಿಸ್ತಾನ ಇದೀಗ ಮತ್ತೊಮ್ಮೆ ಹಿನ್ನಡೆ ಅನುಭವಿಸಿದೆ.





