ಮೊದಲ ಟೆಸ್ಟ್: ವೆಸ್ಟ್ಇಂಡೀಸ್ಗೆ ಸೋಲುಣಿಸಿದ ಪಾಕಿಸ್ತಾನ ತಂಡ
ಮಿಂಚಿದ ಸಾಜಿದ್ ಖಾನ್,ಅಬ್ರಾರ್ ಅಹ್ಮದ್

PC : NDTV
ಮುಲ್ತಾನ್: ಸ್ಪಿನ್ದ್ವಯರಾದ ಸಾಜಿದ್ ಖಾನ್ ಹಾಗೂ ಅಬ್ರಾರ್ ಅಹ್ಮದ್ ನೆರವಿನಿಂದ ಪಾಕಿಸ್ತಾನ ಕ್ರಿಕೆಟ್ ತಂಡವು ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 127 ರನ್ ಅಂತರದಿಂದ ಗೆದ್ದುಕೊಂಡಿದೆ.
3ನೇ ದಿನದಾಟವಾದ ರವಿವಾರ ಗೆಲ್ಲಲು 251 ರನ್ ಗುರಿ ಪಡೆದ ವಿಂಡೀಸ್ ತಂಡವನ್ನು ಸಾಜಿದ್(5-50) ಹಾಗೂ ಅಬ್ರಾರ್(4-27) 4ನೇ ಇನಿಂಗ್ಸ್ನಲ್ಲಿ 36.3 ಓವರ್ಗಳಲ್ಲಿ 123 ರನ್ಗೆ ಸರ್ವಪತನಗೊಳಿಸಿದರು. ಈ ಗೆಲುವಿನ ಮೂಲಕ ವಿಂಡೀಸ್ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಸಾಜಿದ್ ಪಂದ್ಯದಲ್ಲಿ 115 ರನ್ ನೀಡಿ ಒಟ್ಟು 9 ವಿಕೆಟ್ಗಳನ್ನು ಪಡೆದು ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಈ ಸಾಹಸಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ವಿಂಡೀಸ್ ಪರ ಅಲಿಕ್ ಅಥನಾಝ್ ಸರ್ವಾಧಿಕ ಸ್ಕೋರ್(55 ರನ್) ಗಳಿಸಿದ್ದು, ಟೆವಿನ್ ಇಮ್ಲಾಚ್ರೊಂದಿಗೆ 6ನೇ ವಿಕೆಟ್ಗೆ 41 ರನ್ ಜೊತೆಯಾಟ ನಡೆಸಿದರು.
ಇದಕ್ಕೂ ಮೊದಲು 3 ವಿಕೆಟಿಗೆ 109 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ತಂಡವು ಜೊಮೆಲ್ ವಾರಿಕನ್(7-32)ಸ್ಪಿನ್ ದಾಳಿಗೆ ತತ್ತರಿಸಿ ನಿನ್ನೆಯ ಮೊತ್ತಕ್ಕೆ 48 ರನ್ ಸೇರಿಸುವಷ್ಟರಲ್ಲಿ 157 ರನ್ಗೆ ಆಲೌಟಾಯಿತು.
ಸರಣಿಯ 2ನೇ ಪಂದ್ಯವು ಮುಲ್ತಾನ್ನಲ್ಲಿಯೇ ಜನವರಿ 25ರಿಂದ ಆರಂಭವಾಗಲಿದೆ.





