ಪಾಕಿಸ್ತಾನದ ಮಹಿಳಾ ಕ್ರಿಕೆಟ್ ನಾಯಕಿ ಫಾತಿಮಾ ಸನಾಗೆ ಧೋನಿಯೇ ಸ್ಫೂರ್ತಿ!

ಎಂ.ಎಸ್.ಧೋನಿ , ಫಾತಿಮಾ ಸನಾ | PC : NDTV
ಹೊಸದಿಲ್ಲಿ, ಸೆ.3: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಅವರಿಂದ ಸ್ಫೂರ್ತಿ ಪಡೆದಿರುವ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ‘ಕ್ಯಾಪ್ಟನ್ ಕೂಲ್’ ಧೋನಿ ರೀತಿ ಇರಲು ಬಯಸುತ್ತೇನೆ ಎಂದಿದ್ದಾರೆ.
ಈ ತಿಂಗಳ 30ರಿಂದ ಆರಂಭವಾಗಲಿರುವ ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಪಾಕ್ ತಂಡ ಮುನ್ನಡೆಸಲು ಸಜ್ಜಾಗಿರುವ ಸನಾ, ಪ್ರಮುಖ ಟೂರ್ನಿಗಳಲ್ಲಿ ತಂಡ ಮುನ್ನಡೆಸುವುದಕ್ಕೆ ಹಿಂಜರಿಕೆ ಇದ್ದೇ ಇರುತ್ತದೆ. ಆದರೆ ಭಾರತ ತಂಡದ ಮಾಜಿ ನಾಯಕ ಧೋನಿಯಿಂದ ಸ್ಫೂರ್ತಿ ಪಡೆಯಲು ಯತ್ನಿಸುತ್ತೇನೆ ಎಂದರು.
‘‘ಭಾರತ ಹಾಗೂ ಸಿಎಸ್ ಕೆ ತಂಡಗಳ ನಾಯಕರಾಗಿ ಧೋನಿ ಮುನ್ನಡೆಸಿದ ಪಂದ್ಯಗಳನ್ನು ನೋಡಿದ್ದೇನೆ. ಮೈದಾನದಲ್ಲಿ ನಿರ್ಧಾರ ತೆಗೆದುಕೊಳ್ಳುವ ರೀತಿ, ಶಾಂತತೆ ಹಾಗೂ ಅವರು ತಮ್ಮ ಆಟಗಾರರನ್ನು ಬೆಂಬಲಿಸುವ ರೀತಿಯಿಂದ ಕಲಿಯಲು ಸಾಕಷ್ಟಿದೆ. ನಾನು ನಾಯಕತ್ವದ ಜವಾಬ್ದಾರಿ ಪಡೆದಾಗ, ಧೋನಿಯಂತೆ ಆಡಬೇಕೆಂದು ಭಾವಿಸಿದ್ದೆ. ನಾನು ಅವರ ಸಂದರ್ಶನಗಳನ್ನು ಕೂಡ ನೋಡಿ ಬಹಳಷ್ಟು ಕಲಿತಿದ್ದೇನೆ’’ ಎಂದು ಸನಾ ಹೇಳಿದರು.
ಫಾತಿಮಾ 2019ರ ಮೇ 6ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.







