ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಝ್ ವಿದಾಯ

Photo : ವಹಾಬ್ ರಿಯಾಝ್ | PTI
ಕರಾಚಿ: ಪಾಕಿಸ್ತಾನದ ವೇಗದ ಬೌಲರ್ ವಹಾಬ್ ರಿಯಾಝ್ ಬುಧವಾರ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದರು. ಆದರೆ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡುವುದನ್ನು ಮುಂದುವರಿಸಲಿರುವುದಾಗಿ ಹೇಳಿದ್ದಾರೆ.
ರಿಯಾಝ್ 154 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಮೂರು ಬಾರಿ ಐದು ವಿಕೆಟ್ ಗೊಂಚಲು ಸಹಿತ ಒಟ್ಟು 237 ವಿಕೆಟ್ ಗಳನ್ನು ಕಬಳಿಸಿದ್ದಾರೆ.
2008ರಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಗೆ ಕಾಲಿಟ್ಟಿರುವ ರಿಯಾಝ್ 2015ರಲ್ಲಿ ಆಸ್ಟ್ರೇಲಿಯದ ಶೇನ್ ವಾಟ್ಸನ್ ವಿರುದ್ಧ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಮಾರಕ ಬೌಲಿಂಗ್ ದಾಳಿಯ ಮೂಲಕ ಎಲ್ಲರ ನೆನಪಿನಲ್ಲಿ ಉಳಿದಿದ್ದಾರೆ. ಎಡಗೈ ವೇಗಿ ರಿಯಾಝ್ ವೇಗದ ಶಾರ್ಟ್ಪಿಚ್ ಎಸೆತಗಳ ಮೂಲಕ ವ್ಯಾಟ್ಸನ್ರನ್ನು ಕಾಡಿದ್ದರು. ನಾನು ಏಕದಿನ ಕ್ರಿಕೆಟ್ನಲ್ಲಿ ಎದುರಿಸಿದ ಉತ್ತಮ ಎಸೆತ ಇದಾಗಿತ್ತು ಎಂದು ಆಗಿನ ಆಸ್ಟ್ರೇಲಿಯದ ನಾಯಕ ಮೈಕಲ್ ಕ್ಲಾರ್ಕ್ ಬಣ್ಣಿಸಿದ್ದರು.
ಆಸೀಸ್ ವಿರುದ್ಧದ ವಿಶ್ವಕಪ್ ಕ್ವಾರ್ಟರ್ ಫೈನಲ್ನಲ್ಲಿ ರಿಯಾಝ್ ತನ್ನ ಆರು ಓವರ್ಗಳ ಮೊದಲ ಸ್ಪೆಲ್ನಲ್ಲಿ ವಾರ್ನರ್ ಹಾಗೂ ಕ್ಲಾರ್ಕ್ ಸಹಿತ 54 ರನ್ಗೆ 2 ವಿಕೆಟ್ ಪಡೆದಿದ್ದರು.
2015ರ ವಿಶ್ವಕಪ್ನಲ್ಲಿ ಒಟ್ಟು 16 ವಿಕೆಟ್ಗಳನ್ನು ಪಡೆದಿದ್ದ ರಿಯಾಝ್ ಟೂರ್ನಿಯಲ್ಲಿ ಪಾಕ್ ಬೌಲರ್ಗಳ ಪೈಕಿ ಶ್ರೇಷ್ಠ ಪ್ರದರ್ಶನ ನೀಡಿದ್ದರು.