ಪ್ಯಾನ್ ಪೆಸಿಫಿಕ್ ಓಪನ್: 10ನೇ ಪ್ರಶಸ್ತಿ ಗೆದ್ದ ಬೆಲಿಂಡಾ ಬೆನ್ಸಿಕ್

ಲಿಂಡಾ ನೊಸ್ಕೋವಾ | Photo Credit : AP \ PTI
ಟೋಕಿಯೊ, ಅ.26: ಡಬ್ಲ್ಯುಟಿಎ ಪಾನ್ ಪೆಸಿಫಿಕ್ ಓಪನ್ ಟೆನಿಸ್ ಟೂರ್ನಿಯಲ್ಲಿ ಲಿಂಡಾ ನೊಸ್ಕೋವಾರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿರುವ ಬೆಲಿಂಡಾ ಬೆನ್ಸಿಕ್ ಅವರು ತನ್ನ ವೃತ್ತಿಜೀವನದ 10ನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
ರವಿವಾರ ಒಂದು ಗಂಟೆ, 22 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಸ್ವಿಸ್ ಆಟಗಾರ್ತಿ ಬೆನ್ಸಿಕ್ ಅವರು ನೊಸ್ಕೋವಾರನ್ನು 6-2, 6-3 ಸೆಟ್ ಗಳ ಅಂತರದಿಂದ ಮಣಿಸಿದರು.
ಬೆನ್ಸಿಕ್ ಅವರು ದಶಕದ ನಂತರ ಟೋಕಿಯೊ ಪಂದ್ಯಾವಳಿಯ ಫೈನಲ್ಸ್ಗೆ ವಾಪಸಾಗಿದ್ದಾರೆ. ರವಿವಾರದ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದಿದ್ದಾರೆ.
ಟೋಕಿಯೊ ಮೈದಾನವು ಬೆನ್ಸಿಕ್ ಪಾಲಿಗೆ ವಿಶೇಷವಾಗಿದ್ದು, ನಾಲ್ಕು ವರ್ಷಗಳ ಹಿಂದೆ ಒಲಿಂಪಿಕ್ಸ್ ಸಿಂಗಲ್ಸ್ ಚಿನ್ನದ ಪದಕ ಹಾಗೂ ಡಬಲ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು.
ಬೆನ್ಸಿಕ್ ಅವರ ಫೈನಲ್ ಹಾದಿ ಅತ್ಯಂತ ಸವಾಲಿನದ್ದಾಗಿದ್ದು, ಕಳೆದ ಎರಡು ದಿನಗಳಲ್ಲಿ 5 ಗಂಟೆ, 23 ನಿಮಿಷಗಳನ್ನು ಟೆನಿಸ್ ಅಂಗಳದಲ್ಲೇ ಕಳೆದಿದ್ದಾರೆ. ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್ನಲ್ಲಿ ಸತತ 3 ಸೆಟ್ ಗಳಿಂದ ಗೆಲುವು ದಾಖಲಿಸಿದ್ದರು.





