‘ಲಾರಿಯಸ್ ವರ್ಷದ ಶ್ರೇಷ್ಠ ಮರುಪ್ರವೇಶಗೈದ ಆಟಗಾರ’ ಪ್ರಶಸ್ತಿಗೆ ಪಂತ್ ನಾಮನಿರ್ದೇಶನ

ರಿಷಭ್ ಪಂತ್ | PTI
ಚೆನ್ನೈ: ಭಾರತೀಯ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ರನ್ನು ಸೋಮವಾರ ‘ವರ್ಷದ ಶ್ರೇಷ್ಠ ಮರುಪ್ರವೇಶ ಮಾಡಿದ ಆಟಗಾರ’ ವಿಭಾಗದಲ್ಲಿ ಲಾರಿಯಸ್ ವರ್ಲ್ಡ್ ಸ್ಪೋರ್ಟ್ಸ್ 2025 ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
2022 ಡಿಸೆಂಬರ್ 30ರಂದು ದಿಲ್ಲಿಯಿಂದ ರೂರ್ಕೀಗೆ ಕಾರಿನಲ್ಲಿ ಹೋಗುತ್ತಿದ್ದಾಗ ನಡೆದ ರಸ್ತೆ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಕಾರು ಚಲಾಯಿಸುತ್ತಿದ್ದಾಗ ನಿದ್ದೆಗೆ ಜಾರಿದರು ಹಾಗೂ ಕಾರು ರಸ್ತೆ ವಿಭಾಜಕಕ್ಕೆ ಢಿಕ್ಕಿ ಹೊಡೆದಿತ್ತು. ತಕ್ಷಣ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು.
ಅವರ ಬಲ ಮಂಡಿ, ಕೈತಟ್ಟು ಮತ್ತು ಪಾದಕ್ಕೆ ಗಾಯಗಳಾಗಿದ್ದವು.
ಗಾಯದಿಂದ ಚೇತರಿಸಿಕೊಂಡ ಬಳಿಕ, ಅವರು ತನ್ನ ಮೊದಲ ಪಂದ್ಯ ಆಡಿದ್ದು 2024ರ ಐಪಿಎಲ್ನಲ್ಲಿ. ಬಳಿಕ ಭಾರತ ತಂಡದಲ್ಲಿಯೂ ಅವರು ಕಾಣಿಸಿಕೊಂಡು ಪ್ರಬಲ ಪ್ರದರ್ಶನ ನೀಡಿದರು.
ಲಾರಿಯಸ್ ವರ್ಲ್ಡ್ ಕಮ್ಬ್ಯಾಕ್ ಆಫ್ ದ ಯೀಯರ್ ಪ್ರಶಸ್ತಿಗೆ ನಾಮಕರಣಗೊಂಡವರು: ರೆಬೆಕಾ ಅಂಡ್ರಾಡೆ (ಬ್ರೆಝಿಲ್)-ಜಿಮ್ನಾಸ್ಟಿಕ್ಸ್, ಸೇಲಬ್ ಡ್ರೆಸೆಲ್ (ಅಮೆರಿಕ)- ಈಜು, ಲಾರಾ ಗಟ್-ಬೆಹ್ರಾಮಿ (ಸ್ವಿಟ್ಸರ್ಲ್ಯಾಂಡ್)- ಆಲ್ಪೈನ್ ಸ್ಕೀಯಿಂಗ್, ಮಾರ್ಕ್ ಮಾರ್ಕೀಝ್ (ಸ್ಪೇನ್)- ಮೋಟರ್ ಸೈಕ್ಲಿಂಗ್, ರಿಶಭ್ ಪಂತ್ (ಭಾರತ)- ಕ್ರಿಕೆಟ್, ಆ್ಯರಿಯಾರ್ನ್ ಟಿಟ್ಮಸ್ (ಆಸ್ಟ್ರೇಲಿಯ)- ಈಜು.







