ಐಸಿಸಿ ನೀತಿ ಸಂಹಿತೆ ಉಲ್ಲಂಘನೆ; ರಿಷಭ್ ಪಂತ್ ಗೆ ಛೀಮಾರಿ
1 ಡಿಮೆರಿಟ್ ಪಾಯಿಂಟ್ ಜಮೆ

ರಿಷಭ್ ಪಂತ್ | PC : X \ @CricketNDTV
ಲೀಡ್ಸ್: ಹೆಡ್ಡಿಂಗ್ಲೆ ಟೆಸ್ಟ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ ಲೆವೆಲ್-1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಗೆ ಅಧಿಕೃತವಾಗಿ ಛೀಮಾರಿ ಹಾಕಲಾಗಿದೆ.
ಮಾತ್ರವಲ್ಲ ಪಂತ್ ಅವರ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಜಮೆ ಮಾಡಲಾಗಿದೆ. ಇದು 24 ತಿಂಗಳಲ್ಲಿ ಪಂತ್ ಅವರ ಮೊದಲ ತಪ್ಪಾಗಿದೆ.
ಅಂತರ್ರಾಷ್ಟ್ರೀಯ ಪಂದ್ಯವೊಂದರಲ್ಲಿ ಅಂಪೈರ್ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸುವುದಕ್ಕೆ ಸಂಬಂಧಿಸಿದ ಆಟಗಾರರು ಹಾಗೂ ಆಟಗಾರರ ಸಹಾಯಕ ಸಿಬ್ಬಂದಿಯ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.8 ಅನ್ನು ಪಂತ್ ಉಲ್ಲಂಘಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಇಂಗ್ಲೆಂಡ್ ತಂಡದ ಮೊದಲ ಇನಿಂಗ್ಸ್ ನ 61ನೇ ಓವರ್ನಲ್ಲಿ ಪಂತ್ ಅವರು ಚೆಂಡಿನ ಸ್ಥಿತಿಯ ಬಗ್ಗೆ ಅಂಪೈರ್ಗಳೊಂದಿಗೆ ಚರ್ಚಿಸಿ, ಚೆಂಡು ಬದಲಾಯಿಸುವಂತೆ ವಿನಂತಿಸಿದ್ದರು. ಚೆಂಡನ್ನು ಪರೀಕ್ಷಿಸಿದ ನಂತರ ಅಂಪೈರ್ ಪಂತ್ ಮನವಿಯನ್ನು ತಿರಸ್ಕರಿಸಿದರು. ಅಂಪೈರ್ ಎದುರೇ ಚೆಂಡನ್ನು ಜೋರಾಗಿ ನೆಲಕ್ಕೆ ಎಸೆದಿದ್ದ ಪಂತ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಘಟನೆ ನಡೆಯುವಾಗ ಬೆನ್ ಸ್ಟೋಕ್ಸ್ ಹಾಗೂ ಹ್ಯಾರಿ ಬ್ರೂಕ್ ಕ್ರೀಸ್ನಲ್ಲಿದ್ದರು.
ಪಂತ್ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ನೀಡಿದ ವಾಗ್ದಂಡನೆಯನ್ನು ಸ್ವೀಕರಿಸಿದ್ದಾರೆ.