ಕಿವೀಸ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ಪಂತ್: ಧ್ರುವ ಜೂರೆಲ್ ತಂಡಕ್ಕೆ ಸೇರ್ಪಡೆ

PC : newindianexpress
ವಡೋದರ, ಜ. 11: ಪ್ರವಾಸಿ ನ್ಯೂಝಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಭಾರತೀಯ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ರವಿವಾರ ಹೊರಗಿಡಲಾಗಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಘೋಷಿಸಿದೆ. ತಂಡದಲ್ಲಿ ಅವರ ಸ್ಥಾನವನ್ನು ಧ್ರುವ ಜೂರೆಲ್ ಭರ್ತಿಮಾಡಲಿದ್ದಾರೆ.
ಮೊದಲ ಏಕದಿನ ಪಂದ್ಯದ ಮುನ್ನಾದಿನವಾದ ಶನಿವಾರ ವಡೋದರದ ಬಿಸಿಎ ಸ್ಟೇಡಿಯಂನಲ್ಲಿ ನಡೆದ ನೆಟ್ ಅಭ್ಯಾಸದ ವೇಳೆ ಪಂತ್ ಗಾಯಗೊಂಡಿದ್ದರು.
“ಶನಿವಾರ ಅಪರಾಹ್ನ ಭಾರತದ ನೆಟ್ ಅಭ್ಯಾಸದ ವೇಳೆ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಷಭ್ ಪಂತ್ ಅವರಿಗೆ ಕಿಬ್ಬೊಟ್ಟೆಯಲ್ಲಿ ದಿಢೀರ್ ನೋವು ಕಾಣಿಸಿಕೊಂಡಿತು,” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
“ಅವರನ್ನು ತಕ್ಷಣ ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಲಾಯಿತು. ಅವರ ಸ್ಥಿತಿಗತಿಯ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡವು ವೈದ್ಯಕೀಯ ಪರಿಣತರೊಂದಿಗೆ ವಿವರವಾದ ಚರ್ಚೆ ನಡೆಸಿತು. ಪಂತ್ ಅವರಿಗೆ ಕಿಬ್ಬೊಟ್ಟೆಯಲ್ಲಿ ಸ್ನಾಯು ಸೆಳೆತವಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ, ಅವರನ್ನು ಏಕದಿನ ಸರಣಿಯಿಂದ ಹೊರಗಿಡಲಾಗಿದೆ,” ಎಂದು ಪ್ರಕಟಣೆ ತಿಳಿಸಿದೆ.
ಗಾಯ ತೀವ್ರವಾಗಿರುವುದರಿಂದ ಗುಣಮುಖವಾಗಲು ಕನಿಷ್ಠ 10 ದಿನಗಳು ಬೇಕಾಗುತ್ತದೆ ಎನ್ನಲಾಗಿದೆ.
ಹೀಗಾಗಿ, ವಿಜಯ ಹಜಾರೆ ಟ್ರೋಫಿ ನಾಕೌಟ್ ಪಂದ್ಯಗಳಲ್ಲಿ ಆಡಲು ಬೆಂಗಳೂರಿನಲ್ಲಿ ಉತ್ತರ ಪ್ರದೇಶ ತಂಡದೊಂದಿಗೆ ಇದ್ದ ಜೂರೆಲ್ ಅವರನ್ನು ಬರೋಡಕ್ಕೆ ಕರೆಸಿಕೊಳ್ಳಲಾಗಿದೆ.
ಜೂರೆಲ್ ವಿಜಯ ಹಜಾರೆ ಟ್ರೋಫಿಯಲ್ಲಿ ಆಡಿದ ಏಳು ಇನ್ನಿಂಗ್ಸ್ಗಳಲ್ಲಿ 558 ರನ್ ಗಳಿಸಿದ್ದು, ಉತ್ತಮ ಫಾರ್ಮ್ನಲ್ಲಿದ್ದಾರೆ. ಇದರಲ್ಲಿ ಎರಡು ಶತಕಗಳು ಮತ್ತು ನಾಲ್ಕು ಅರ್ಧಶತಕಗಳಿವೆ. ಅವರು ಈ ಪಂದ್ಯಾವಳಿಯಲ್ಲೇ ಲಿಸ್ಟ್ ‘ಎ’ ಕ್ರಿಕೆಟ್ ನಲ್ಲಿನ ತಮ್ಮ ಗರಿಷ್ಠ ಸ್ಕೋರ್ನ್ನು (160 ಔಟಾಗದೆ) ಗಳಿಸಿದ್ದಾರೆ.







