ಬೀಜಿಂಗ್ 2025 ಏಶ್ಯನ್ ಪ್ಯಾರಾ ಬಿಲ್ಲುಗಾರಿಕೆ ಚಾಂಪಿಯನ್ಶಿಪ್ಸ್ : ಹರ್ವಿಂದರ್ ಸಿಂಗ್ ಗೆ ಅವಳಿ ಚಿನ್ನ
ಭಾರತಕ್ಕೆ 2ನೇ ಸ್ಥಾನ

Photo : x
ಬೀಜಿಂಗ್, ಜು. 6: ಬೀಜಿಂಗ್ 2025 ಏಶ್ಯನ್ ಪ್ಯಾರಾ ಬಿಲ್ಲುಗಾರಿಕೆ ಚಾಂಪಿಯನ್ಶಿಪ್ಸ್ನಲ್ಲಿ ರವಿವಾರ ವಿಶ್ವ ನಂಬರ್ ವನ್ ಹಾಗೂ ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಹರ್ವಿಂದರ್ ಸಿಂಗ್ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಇದರೊಂದಿಗೆ ಭಾರತವು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿ ಚೀನಾ ಇದೆ.
ಭಾರತವು ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ಸ್ಪರ್ಧೆಯನ್ನು ಮುಕ್ತಾಯಗೊಳಿಸಿದೆ. ಚೀನಾವು 10 ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ರಿಕರ್ವ್ ಪುರುಷರ ಅರ್ಹತಾ ಸುತ್ತಿನಲ್ಲಿ 663 ಅಂಕಗಳೊಂದಿಗೆ ನೂತನ ಕೂಟ ದಾಖಲೆಯನ್ನು ನಿರ್ಮಿಸಿರುವ ಹರ್ವಿಂದರ್, ಮೊದಲು ರಿಕರ್ವ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಭಾವನಾ ಜೊತೆಗೆ ಚಿನ್ನ ಗೆದ್ದರು. ಕೂಟದ ಕೊನೆಯ ದಿನವಾದ ರವಿವಾರ ಅವರು ರಿಕರ್ವ್ ಪುರುಷರ ಮುಕ್ತ ವಿಭಾಗದಲ್ಲಿ ಇನ್ನೊಂದು ಚಿನ್ನ ಗೆದ್ದರು.
ರಿಕರ್ವ್ ಮುಕ್ತ ಮಿಶ್ರ ತಂಡ ಫೈನಲ್ನಲ್ಲಿ, ಹರ್ವಿಂದರ್ ಮತ್ತು ಭಾವನಾ ಚೀನಾದ ಝಿಹಾನ್ ಗಾವೊ ಮತ್ತು ಜೂನ್ ಗಾನ್ರನ್ನು 5-4 (14-8)ರಿಂದ ಸೋಲಿಸಿದರು.
ರಿಕರ್ವ್ ಪುರುಷರ ಮುಕ್ತ ಫೈನಲ್ನಲ್ಲಿ, ಹರ್ವಿಂದರ್ ಥಾಯ್ಲೆಂಡ್ನ ಹನ್ರೋಚೈ ನೆಟ್ಸಿರಿಯನ್ನು 7-1ರಿಂದ ಸೋಲಿಸಿ ಭಾರತದ ಮೂರನೇ ಚಿನ್ನವನ್ನು ಗೆದ್ದರು.
ಭಾರತದ ಇನ್ನೊಂದು ಚಿನ್ನದ ಪದಕ ಕಾಂಪೌಂಡ್ ಮಹಿಳೆಯರ ತಂಡ ವಿಭಾಗದಲ್ಲಿ ಬಂದಿದೆ. ಈ ಸ್ಪರ್ಧೆಯಲ್ಲಿ ಶೀತಲ್ ದೇವಿ ಮತ್ತು ಜ್ಯೋತಿ ಚೀನಾದ ಲು ಝಾಂಗ್ ಮತ್ತು ಜಿಂಗ್ ಝಾವೊ ಅವರನ್ನು 148-143 ಅಂಕಗಳಿಂದ ಸೋಲಿಸಿದರು.
ಇದಕ್ಕೂ ಮೊದಲು ಹರ್ವಿಂದರ್ ಬೆಳ್ಳಿ ಪದಕವೊಂದನ್ನು ಗೆದ್ದರು. ಆ ಮೂಲಕ ಕೂಟದಲಿ ಮೂರು ಪದಕಗಳನ್ನು ತನ್ನದಾಗಿಸಿಕೊಂಡರು.
ಅವರು ವಿವೇಕ್ ಚಿಕಾರ ಜೊತೆಗೆ ರಿಕರ್ವ್ ಪುರುಷರ ಓಪನ್ ಡಬಲ್ಸ್ ಫೈನಲ್ನಲ್ಲಿ ಆಡುತ್ತಾ, ಚೀನಾದ ಜೂನ್ ಗಾನ್ ಮತ್ತು ಲಿಕ್ಸೂ ಝಾವೊ ವಿರುದ್ಧ 4-5 (17-18)ರ ಸೋಲನುಭವಿಸಿದರು.