ಪ್ಯಾರಿಸ್ ಒಲಿಂಪಿಕ್ಸ್| ಲಕ್ಷ್ಯ ಸೇನ್, ಲವ್ಲಿನಾ ಪದಕಕ್ಕೆ ಇನ್ನೊಂದೇ ಹೆಜ್ಜೆ

ಲಕ್ಷ್ಯ ಸೇನ್ / ಲವ್ಲಿನಾ ಬೊರ್ಗೊಹೈನ್ (PTI)
ಪ್ಯಾರಿಸ್: ಭಾರತದ ಬ್ಯಾಡ್ಮಿಂಟನ್ ನ ನೂತನ ತಾರೆ ಲಕ್ಷ್ಯ ಸೇನ್ ಹಾಗೂ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್ ಪದಕವನ್ನು ಮುಡಿಗೇರಿಸಿಕೊಳ್ಳಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಲಕ್ಷ್ಯ ಸೇನ್ ಮೊದಲ ಒಲಿಂಪಿಕ್ ಪದಕದ ಮೇಲೆ ಕಣ್ಣು ನೆಟ್ಟಿದ್ದರೆ, ಲವ್ಲಿನಾ ಬೊರ್ಗೊಹೈನ್ ಎರಡನೆ ಒಲಿಂಪಿಕ್ ಪದಕವನ್ನು ಗೆಲ್ಲುವ ಸನಿಹಕ್ಕೆ ತಲುಪಿದ್ದಾರೆ.
ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಭರವಸೆಯಾಗಿ ಉದಯೋನ್ಮುಖ ತಾರೆಯಾದ ಲಕ್ಷ್ಯ ಸೇನ್ ಮಾತ್ರ ಉಳಿದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು ಚೀನಾ ತೈಪೆಯ ಚೌ ತಿಯೆನ್ ಚೆನ್ ಅವರನ್ನು ಮಣಿಸುವ ಮೂಲಕ ಸೆಮಿಫೈನಲ್ ಗೆ ಲಗ್ಗೆ ಇಟ್ಟರು. ಸೆಮಿಫೈನಲ್ ನಲ್ಲಿ ಅವರು ಮಾಜಿ ವಿಶ್ವ ಅಗ್ರ ಶ್ರೇಯಾಂಕಿತ, ಡೆನ್ಮಾರ್ಕ್ ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಗೆದ್ದರೆ, ಒಲಿಂಪಿಕ್ಸ್ ನಲ್ಲಿ ಇತಿಹಾಸ ನಿರ್ಮಾಣವಾಗುವುದಲ್ಲದೆ, ಲಕ್ಷ್ಯ ಸೇನ್ ಪದಕವನ್ನು ಮುಡಿಗೇರಿಸಿಕೊಳ್ಳುವುದು ಖಾತರಿಯಾಗಲಿದೆ.
2020ರ ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿದ್ದ ಭಾರತೀಯ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಈ ಬಾರಿಯೂ ಅದನ್ನು ಪುನರಾವರ್ತಿಸಲು ಕೇವಲ ಒಂದು ಹೆಜ್ಜೆ ಮಾತ್ರ ದೂರವಿದ್ದಾರೆ. ಆದರೆ, ಅವರು ಚೀನಾದ ನಂ. 1 ಶ್ರೇಯಾಂಕಿತ ಆಟಗಾರ್ತಿ ಲಿ ಕ್ವಿಯಾನ್ ಅವರಿಂದ ಕಠಿಣ ಸ್ಪರ್ಧೆ ಎದುರಿಸುವುದು ನಿಶ್ಚಿರತವಾಗಿದೆ. ಕಳೆದ ವರ್ಷ ನಡೆದಿದ್ದ ಏಶ್ಯನ್ ಗೇಮ್ಸ್ ಕ್ರೀಡಾ ಕೂಟದ ಫೈನಲ್ ನಲ್ಲಿ ಲಿ ಕ್ವಿಯಾನ್ ಎದುರು ಮಣಿದಿದ್ದ ಲವ್ಲಿನಾ ರಜತ ಪದಕಕ್ಕೆ ತೃಪ್ತಿ ಪಟ್ಟುಕೊಂಡಿದ್ದರು.
ಈ ನಡುವೆ, ಕ್ವಾರ್ಟರ್ ಫೈನಲ್ ತಲುಪಿರುವ ಭಾರತೀಯ ಪುರುಷರ ಹಾಕಿ ತಂಡವು, ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ. ಕ್ರೀಡಾಕೂಟದುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿ, ಆರು ಗೋಲು ಗಳಿಸಿರುವ ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಿ ಬದಲಾಗಿದ್ದಾರೆ.







