ಡೋಪಿಂಗ್: ಓಟಗಾರ ಪರ್ವೇಜ್ ಖಾನ್ ಗೆ 6 ವರ್ಷ ನಿಷೇಧ

ಪರ್ವೇಜ್ ಖಾನ್ | PC : X
ಹೊಸದಿಲ್ಲಿ, ಸೆ.2: ನಿಷೇಧಿತ ದ್ರವ್ಯ ಸೇವಿಸಿ ಸಿಕ್ಕಿ ಬಿದ್ದಿದ್ದಲ್ಲದೆ, ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಡೋಪಿಂಗ್ ಟೆಸ್ಟ್ ತಪ್ಪಿಸಿಕೊಂಡಿರುವ ಭಾರತದ ಮಧ್ಯಮ ಅಂತರದ ಓಟಗಾರ ಪರ್ವೇಜ್ ಖಾನ್ 6 ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದಾರೆ.
ಹರ್ಯಾಣದ ಪಂಚಕುಲದಲ್ಲಿ ನಡೆದ ನ್ಯಾಶನಲ್ ಇಂಟರ್-ಸ್ಟೇಟ್ ಚಾಂಪಿಯನ್ ಶಿಪ್ ನಲ್ಲಿ ಡೋಪಿಂಗ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ತಾತ್ಕಾಲಿಕವಾಗಿ ಅಮಾನತುಗೊಳ್ಳುವ ಮೊದಲು ಕಳೆದ ವರ್ಷ ಅಮೆರಿಕನ್ ಕಾಲೇಜಿಯೇಟ್ ಅತ್ಲೆಟಿಕ್ಸ್ ನಲ್ಲಿ ತನ್ನ ಸಾಧನೆಯ ಮೂಲಕ ಗಮನ ಸೆಳೆದಿದ್ದರು.
ಪರ್ವೇಜ್ ‘ಬಿ’ ಸ್ಯಾಂಪಲ್ ವಿಶ್ಲೇಷಣೆಗೆ ಕೋರಿಕೆ ಸಲ್ಲಿಸಲಿಲ್ಲ. ‘ಎ’ ಸ್ಯಾಂಪಲ್ನಲ್ಲಿನ ತೀರ್ಮಾನವನ್ನು ಒಪ್ಪಿಕೊಂಡಿದ್ದಾರೆ. ಅಂತಹ ಅಪರಾಧಕ್ಕೆ 4 ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗುತ್ತದೆ.
ಹರ್ಯಾಣದ 20ರ ಹರೆಯದ ಓಟಗಾರ 2023ರಲ್ಲಿ ಮೇ 12, ಜುಲೈ 10 ಹಾಗೂ ಡಿ.5 ರಂದು ಮೂರು ಬಾರಿ ಡೋಪಿಂಗ್ ಟೆಸ್ಟ್ ಅನ್ನು ತಪ್ಪಿಸಿಕೊಂಡಿದ್ದಾರೆ. ಒಂದು ವರ್ಷದಲ್ಲಿ 3 ಬಾರಿ ಪರೀಕ್ಷೆಗೆ ಹಾಜರಾಗದೆ ಇದ್ದರೆ 2 ವರ್ಷ ನಿಷೇಧ ಎದುರಿಸಬೇಕಾಗುತ್ತದೆ.
ಪರ್ವೇಜ್ ಅವರ ನಿಷೇಧದ ಅವಧಿಯು ಕಳೆದ ವರ್ಷದ ಆಗಸ್ಟ್ 28ರಿಂದ ಆರಂಭವಾಗಲಿದೆ.
ಇನ್ನಿಬ್ಬರು ಅತ್ಲೀಟ್ ಗಳಾದ ರೇಶ್ಮಾ ದತ್ತ ಕೆವಾಟೆ ಹಾಗೂ ಶ್ರೀರಾಗ್ ಎ.ಎಸ್.ರನ್ನು ಕ್ರಮವಾಗಿ 4 ಹಾಗೂ 5 ವರ್ಷ ನಿಷೇಧಿಸಲಾಗಿದೆ.
ಬಾಕ್ಸರ್ ರೋಹಿತ್ ಚಮೋಲಿ 2 ವರ್ಷ ನಿಷೇಧ, ವೇಟ್ ಲಿಫ್ಟರ್ ಗಳಾದ ದೀಪಕ್ ಸಿಂಗ್ ಹಾಗೂ ಸಿಮ್ರಾನ್ ಜೀತ್ ಕೌರ್ ರನ್ನು ಕ್ರಮವಾಗಿ 4 ಹಾಗೂ 5 ವರ್ಷಗಳ ಕಾಲ ನಿಷೇಧಿಸಲಾಗಿದೆ.







