IPL 2026 | ಪಂಜಾಬ್ ವಿರುದ್ಧ ಮುಂಬೈಗೆ ರೋಮಾಂಚಕ ಜಯ

Photo Credit : BCCI
ಧರ್ಮಶಾಲೆ, ಮೇ 14: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ರೋಮಾಂಚಕ ಪಂದ್ಯವೊಂದರಲ್ಲಿ ಗುರುವಾರ, ತಿಲಕ್ ವರ್ಮಾ ಅವರ ಅಜೇಯ ಅರ್ಧಶತಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿದೆ.
ತಿಲಕ್ ವರ್ಮಾ 33 ಎಸೆತಗಳಲ್ಲಿ 75 ರನ್ ಗಳನ್ನು ಸಿಡಿಸಿ ಔಟಾಗದೆ ಉಳಿದರು. ಅವರಿಗೆ ವಿಲ್ ಜಾಕ್ಸ್ ಸಮರ್ಥ ಜೊತೆಯನ್ನು ನೀಡಿದರು. ಜಾಕ್ಸ್ 10 ಎಸೆತಗಳಲ್ಲಿ 25 ರನ್ ಗಳನ್ನು ಸಿಡಿಸಿ ಔಟಾಗದೆ ಉಳಿದರು.
ಇದರೊಂದಿಗೆ ಪಂಜಾಬ್ ಕಿಂಗ್ಸ್ ಸತತ ಐದನೇ ಸೋಲನ್ನು ಅನುಭವಿಸಿದೆ ಹಾಗೂ ಪ್ಲೇ ಆಫ್ ನಿಂದ ಹೊರಬೀಳುವ ಅಪಾಯವನ್ನು ಎದುರಿಸುತ್ತಿದೆ.
ಧರ್ಮಶಾಲೆಯ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು 20 ಓವರ್ ಗಳಲ್ಲಿ 201 ರನ್ ಗಳ ಗುರಿಯನ್ನು ಪಡೆದ ಮುಂಬೈ ಇಂಡಿಯನ್ಸ್, ಇನ್ನೂ ಒಂದು ಎಸೆತ ಬಾಕಿಯಿರುವಂತೆಯೇ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು 205 ರನ್ ಗಳನ್ನು ಗಳಿಸಿತು.
ರೋಹಿತ್ ಶರ್ಮಾ 25 ಮತ್ತು ರಯಾನ್ ರಿಕಲ್ಟನ್ 48 ರನ್ ಗಳ ದೇಣಿಗೆ ನೀಡಿದರು.
ಪಂಜಾಬ್ ಪರವಾಗಿ ಅಝ್ಮತುಲ್ಲಾ ಉಮರ್ಝೈ 36 ರನ್ ಗಳನ್ನು ನೀಡಿ ಎರಡು ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು, ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟ್ ಗಳ ನಷ್ಟಕ್ಕೆ 200 ರನ್ ಗಳನ್ನು ಗಳಿಸಿತು.
ಪ್ರಭ್ಸಿಮ್ರಾನ್ ಸಿಂಗ್ 32 ಎಸೆತಗಳಲ್ಲಿ 57 ರನ್ ಗಳನ್ನು ಸಿಡಿಸಿದರು. ಆದರೆ ಅವರು ಎರಡು ಜೀವದಾನಗಳನ್ನು ಪಡೆದರು.
ಮುಂಬೈ ಇಂಡಿಯನ್ಸ್ನ ಬೌಲರ್ ಶಾರ್ದುಲ್ ಠಾಕೂರ್ ತಮ್ಮ ನಿಖರ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್ ಗಳನ್ನು ಒಂದು ಹಂತದಲ್ಲಿ ಕಟ್ಟಿ ಹಾಕಿದರು. ಅವರು ನಾಲ್ಕು ವಿಕೆಟ್ ಗಳನ್ನು ಪಡೆದು ಪಂಜಾಬ್ ಕಿಂಗ್ಸ್ನ ಮಧ್ಯಮ ಕ್ರಮಾಂಕಕ್ಕೆ ತೀವ್ರ ಹೊಡೆತ ನೀಡಿದರು.
ಬಳಿಕ, ಕೆಳ ಕ್ರಮಾಂಕದ ಬ್ಯಾಟರ್ಗಳು ಪಂಜಾಬ್ ಕಿಂಗ್ಸ್ನ ರಕ್ಷಣೆಗೆ ಧಾವಿಸಿದರು. ಅವರು ಸಣ್ಣದಾದರೂ ಕ್ಷಿಪ್ರ ಮೊತ್ತಗಳ ಮೂಲಕ ತಂಡದ ಸ್ಕೋರನ್ನು 200ರ ಗಡಿಗೆ ತಂದು ನಿಲ್ಲಿಸಿದರು.
ಪಂಜಾಬ್ನ ಆರಂಭಿಕ ಬ್ಯಾಟರ್ ಪ್ರಿಯಾಂಶ್ ಆರ್ಯ (22) ಮತ್ತು ಪ್ರಭ್ಸಿಮ್ರಾನ್ ಸಿಂಗ್ ಉತ್ತಮ ಆರಂಭವನ್ನೇ ನೀಡಿದರು. ಅವರು ಮೊದಲ ವಿಕೆಟ್ಗೆ 50 ರನ್ ಗಳನ್ನು ಸೇರಿಸಿದರು.
ಕೂಪರ್ ಕಾನಲಿ 21 ರನ್ ಗಳ ಕೊಡುಗೆ ನೀಡಿದರು.
ಮಧ್ಯಮ ಕ್ರಮಾಂಕದ ಕುಸಿತದ ಬಳಿಕ, ಕೆಳ ಕ್ರಮಾಂಕದಲ್ಲಿ ಅಝ್ಮತುಲ್ಲಾ ಉಮರ್ಝೈ ತಂಡಕ್ಕೆ ಪುನಶ್ಚೇತನ ನೀಡಿದರು. ಅವರು 17 ಎಸೆತಗಳಲ್ಲಿ 38 ರನ್ ಗಳನ್ನು ಸಿಡಿಸಿದರು. ಕೊನೆಯಲ್ಲಿ ಝೇವಿಯರ್ ಬಾರ್ಟ್ಲೆಟ್ 7 ಎಸೆತಗಳಲ್ಲಿ 18 ರನ್ ಗಳನ್ನು ಸಿಡಿಸಿ ಅಜೇಯವಾಗಿ ಉಳಿದರು.
ಗುರುವಾರ ಮುಂಬೈ ತಂಡವನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಿದರು. ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಉಪನಾಯಕ ಸೂರ್ಯಕುಮಾರ್ ಯಾದವ್ ಇಬ್ಬರೂ ಗೈರಾಗಿದ್ದರು.
►ಸಂಕ್ಷಿಪ್ತ ಸ್ಕೋರ್
►ಪಂಜಾಬ್ ಕಿಂಗ್ಸ್ (20 ಓವರ್ಗಳಲ್ಲಿ) 200-8
ಪ್ರಿಯಾಂಶ್ ಆರ್ಯ 22, ಪ್ರಭ್ಸಿಮ್ರಾನ್ ಸಿಂಗ್ 57, ಕೂಪರ್ ಕಾನಲಿ 21, ಅಝ್ಮತುಲ್ಲಾ ಉಮರ್ಝೈ 38
ದೀಪಕ್ ಚಾಹರ್ 2-36, ಶಾರ್ದುಲ್ ಠಾಕೂರ್ 4-39
►ಮುಂಬೈ ಇಂಡಿಯನ್ಸ್ (19.5 ಓವರ್ಗಳಲ್ಲಿ) 205-4
ರೋಹಿತ್ ಶರ್ಮಾ 25, ರಯಾನ್ ರಿಕಲ್ಟನ್ 48, ತಿಲಕ್ ವರ್ಮಾ (ಔಟಾಗದೆ) 75, ಶರ್ಫೇನ್ ರುದರ್ಫೋರ್ಡ್ 20, ವಿಲ್ ಜಾಕ್ಸ್ (ಔಟಾಗದೆ) 25
ಅಝ್ಮತುಲ್ಲಾ ಉಮರ್ಝೈ 2-36






