FIFA 2026 | ಕೊನೆಯ ನಿಮಿಷಗಳಲ್ಲಿ ಪೆನಾಲ್ಟಿ ಗೋಲು : ಝೆಕ್ ವಿರುದ್ಧ ಸೋಲುತ್ತಿದ್ದ ಪಂದ್ಯವನ್ನು ಡ್ರಾ ಮಾಡಿದ ದಕ್ಷಿಣ ಆಫ್ರಿಕಾ

ತೆಬೊಹೊ ಮೊಕೊಯೆನಾ (ಬಲ) Photo : x.com/fmtoday
ಅಟ್ಲಾಂಟಾ: ತೆಬೊಹೊ ಮೊಕೊಯೆನಾ ಅವರ ಕೊನೆಯ ನಿಮಿಷಗಳ ಪೆನಾಲ್ಟಿ ಗೋಲು ನೆರವಿನಿಂದ ಸೋಲುತ್ತಿದ್ದ ಪಂದ್ಯವನ್ನು ಡ್ರಾ ಮಾಡುವ ಮೂಲಕ ದಕ್ಷಿಣ ಆಫ್ರಿಕಾ ತಂಡವು ಮುಂದಿನ ಸುತ್ತು ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿದೆ. ಎ ಗುಂಪಿನ ಪಂದ್ಯದಲ್ಲಿ ಝೆಕ್ ಗಣರಾಜ್ಯದ ವಿರುದ್ಧ 1-1 ಗೋಲುಗಳ ಮೂಲಕ ಸಮಬಲ ಸಾಧಿಸಿ ಈ ವಿಶ್ವಕಪ್ ನಲ್ಲಿ ಮೊದಲ ಅಂಕ ಗಳಿಸಿತು .
ಝೆಕ್ ಗಣರಾಜ್ಯ ಆರಂಭದಿಂದಲೂ ಹಲವು ಗೋಲು ಗಳಿಸುವ ಅವಕಾಶ ಗಳನ್ನು ವ್ಯರ್ಥ ಮಾಡುತ್ತಲೇ ಹೋಯಿತು . ಪಂದ್ಯ ಆರಂಭವಾಗಿ ಕೇವಲ 50 ಸೆಕೆಂಡುಗಳಾಗಿದ್ದಾಗ ಸಿಕ್ಕ ಉತ್ತಮ ಅವಕಾಶದಲ್ಲಿ ಪ್ಯಾಟ್ರಿಕ್ ಶಿಕ್ ಹೆಡರ್ ಮೂಲಕ ಗೋಲು ಗಳಿಸಲು ವಿಫಲರಾಗಿದ್ದರು. ಆದರೆ ಆರನೇ ನಿಮಿಷದಲ್ಲಿ ಮೈಕಲ್ ಸ್ಯಾಡಿಲೆಕ್ ಹೊಡೆದ ಗೋಲು ತಂಡಕ್ಕೆ ಮುನ್ನಡೆ ತಂದುಕೊಟ್ಟಿತು .
ಆದರೆ ಪಂದ್ಯದ ಬಹುಪಾಲು ಅವಧಿಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಮಂದಗತಿಯ ಆಟ ಪ್ರದರ್ಶಿಸಿತು. ಪಂದ್ಯ ಮುಗಿಯಲು ಕೇವಲ ಒಂಬತ್ತು ನಿಮಿಷಗಳು ಬಾಕಿ ಇರುವಾಗ ಝೆಕ್ ತಂಡದ ಪಾವೆಲ್ ಸುಲ್ಕ್ ಮಾಡಿದ ಹ್ಯಾಂಡ್ಬಾಲ್ ಫೌಲ್ ಆಫ್ರಿಕಾ ತಂಡಕ್ಕೆ ಪೆನಾಲ್ಟಿ ಅವಕಾಶವನ್ನು ನೀಡಿತು .ತೆಬೊಹೊ ಮೊಕೊಯೆನಾ ಅದನ್ನು ಗೋಲಾಗಿ ಪರಿವರ್ತಿಸಿ ತಂಡವನ್ನು ಸೋಲಿನಿಂದ ಪಾರು ಮಾಡಿದರು .
ಈ ಮೂಲಕ ಉಭಯ ತಂಡಗಳು ತಲಾ 1 ಅಂಕ ಗಳಿಸಿ ಗುಂಪಿನಲ್ಲಿ ಮೂರನೇ ಸ್ಥಾನದ ಆಸೆಯನ್ನು ಜೀವಂತವಾಗಿರಿಸಿದರು .




