ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಪೂನಂ ರಾವತ್ ನಿವೃತ್ತಿ

ಪೂನಂ ರಾವತ್ | Photo Credit : PTI
ಹೊಸದಿಲ್ಲಿ: ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಅಗ್ರ ಸರದಿಯ ಬ್ಯಾಟರ್ ಆಗಿದ್ದ ಪೂನಮ್ ರಾವತ್ ಗುರುವಾರ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲ ಮಾದರಿಯ ಪಂದ್ಯಗಳಿಂದ ನಿವೃತ್ತಿ ಪ್ರಕಟಿಸಿದ್ದಾರೆ.
37ರ ವಯಸ್ಸಿನ ಪೂನಂ 2009 ಹಾಗೂ 2021ರ ನಡುವೆ ನಾಲ್ಕು ಟೆಸ್ಟ್, 73 ಏಕದಿನ ಹಾಗೂ 35 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು.
‘‘ಸಾಕಷ್ಟು ಯೋಚಿಸಿದ ನಂತರ ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲ ಮಾದರಿಯ ಪಂದ್ಯಗಳಿಂದ ನಿವೃತಿಯಾಗಲು ನಿರ್ಧರಿಸಿದ್ದೇನೆ. ನನ್ನ ಜೀವನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಮಹಾ ಗೌರವವಾಗಿದೆ. ಕ್ರಿಕೆಟ್ ಒಂದು ಕ್ರೀಡೆಗಿಂತಲೂ ಮಿಗಿಲಾದುದು. ಅದು ನನ್ನ ಸ್ವಭಾವವನ್ನು ರೂಪಿಸಿದೆ. ನನಗೆ ಪ್ರತಿರೋಧವನ್ನು ಕಲಿಸಿದೆ, ಸದಾ ಕಾಲ ಸ್ಮರಿಸುವ ನೆನಪುಗಳನ್ನ ನೀಡಿದೆ. ಪ್ರತಿ ಬಾರಿ ಭಾರತ ತಂಡದ ಜರ್ಸಿ ಧರಿಸಿದಾಗ ನನಗೆ ತುಂಬಾ ಹೆಮ್ಮೆಯಾಗುತ್ತಿತ್ತು. ಭಾರತ ತಂಡದ ಜರ್ಸಿ ಧರಿಸುವ ಕನಸು ನನಸಾಗಿದೆ. ನನ್ನ ಮೇಲಿಟ್ಟಿರುವ ನಂಬಿಕೆ ಹಾಗೂ ನಾನು ಸ್ವೀಕರಿಸಿದ ಬೆಂಬಲಕ್ಕೆ ಯಾವಾಗಲೂ ಆಭಾರಿಯಾಗಿರುವೆ’’ ಎಂದು ರಾವತ್ ಹೇಳಿದ್ದಾರೆ.
ಕ್ರಿಕೆಟಿಗಳಾಗಿ ಬೆಳವಣಿಗೆ ಕಾಣಲು ನೆರವಾದ ಮುಂಬೈ ಕ್ರಿಕೆಟ್ ಸಂಸ್ಥೆಗೆ ರಾವತ್ ಧನ್ಯವಾದ ಸಲ್ಲಿಸಿದರು.
‘‘ನನ್ನ ಆರಂಭಿಕ ದಿನಗಳಲ್ಲಿ ನನ್ನ ಮೇಲೆ ನಂಬಿಕೆ ಇಟ್ಟಿದ್ದ ಮುಂಬೈ ಕ್ರಿಕೆಟ್ ಅಸೋಸಿಯೇಶನ್ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಅಲ್ಲಿ ಲಭಿಸಿದ ಅವಕಾಶಗಳು ಹಾಗೂ ಮಾರ್ಗದರ್ಶನವು ನನ್ನ ಕ್ರಿಕೆಟ್ ಪಯಣಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿತು’’ ಎಂದು ರಾವತ್ ಹೇಳಿದ್ದಾರೆ.
ರಾವತ್ 73 ಏಕದಿನ ಪಂದ್ಯಗಳಲ್ಲಿ 2,299 ರನ್, 35 ಟಿ-20 ಪಂದ್ಯಗಳಲ್ಲಿ 719 ರನ್ ಹಾಗೂ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 264 ರನ್ ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ ಮೂರು ಶತಕ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ 2014ರಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಏಕೈಕ ಶತಕ ಗಳಿಸಿದ್ದರು. ಏಕದಿನ ಕ್ರಿಕೆಟ್ನಲ್ಲಿ 15 ಅರ್ಧಶತಕ ಹಾಗೂ ಟಿ-20ಯಲ್ಲಿ ನಾಲ್ಕು ಅರ್ಧಶತಕ ಗಳಿಸಿದ್ದರು. 2021ರ ಜೂನ್ನಲ್ಲಿ ಇಂಗ್ಲೆಂಡ್ ವಿರುದ್ಧ ಆಡಿರುವ ಏಕದಿನ ಪಂದ್ಯವು ಕೊನೆಯ ಅಂತರ್ರಾಷ್ಟ್ರೀಯ ಪಂದ್ಯವಾಗಿತ್ತು.
2017ರ ಮಹಿಳೆಯರ ವಿಶ್ವಕಪ್ ಫೈನಲ್ನಲ್ಲಿ ರಾವತ್ ಭಾರತದ ಪರ ಅತ್ಯಂತ ಸ್ಮರಣೀಯ ಪ್ರದರ್ಶನ ನೀಡಿದ್ದರು. ಆಗ ಅವರು ಪಂದ್ಯಾವಳಿಯಲ್ಲಿ ಒಟ್ಟು 381 ರನ್ ಗಳಿಸಿದ್ದರು. ಇದರಲ್ಲಿ ಲಾರ್ಡ್ಸ್ನಲ್ಲಿ ನಡೆದಿದ್ದ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ್ದ 86 ರನ್ ಕೂಡ ಸೇರಿದೆ. ಭಾರತವು ಫೈನಲ್ ಪಂದ್ಯವನ್ನು 9 ರನ್ನಿಂದ ಸೋತಿತ್ತು.
2017ರ ವಿಶ್ವಕಪ್ನಲ್ಲಿ ರಾವತ್ ಐರ್ಲ್ಯಾಂಡ್ ತಂಡದ ವಿರುದ್ದ 109 ರನ್ ಗಳಿಸಿದ್ದರು. ದೀಪ್ತಿ ಶರ್ಮಾ ಅವರೊಂದಿಗೆ ಮೊದಲ ವಿಕೆಟ್ನಲ್ಲಿ ದಾಖಲೆಯ 320 ರನ್ ಜೊತೆಯಾಟ ನಡೆಸಿದ್ದರು.
2021ರಲ್ಲಿ ಆಸ್ಟ್ರೇಲಿಯದ ವಿರುದ್ಧದ ಐತಿಹಾಸಿಕ ಪಿಂಕ್-ಬಾಲ್ ಟೆಸ್ಟ್ನ ಭಾಗವಾಗಿದ್ದರು. ಆಗ ಅವರು ಮೊದಲ ಇನಿಂಗ್ಸ್ನಲ್ಲಿ 36 ರನ್ ಗಳಿಸಿದ್ದರು.






