ಟೂರ್ನಿಯುದ್ದಕ್ಕೂ ಕಳಪೆ ಫೀಲ್ಡಿಂಗ್; ಮುಂಬೈ ಇಂಡಿಯನ್ಸ್ ನಾಯಕ ನಿರಾಸೆ

Photo: x.com/NewsNationTV
ಹೊಸದಿಲ್ಲಿ: ಈಡನ್ ಗಾರ್ಡನ್ಸ್ ನಲ್ಲಿ ಬುಧವಾರ ಕೊಲ್ಕತ್ತ ನೈಟ್ ರೈಡರ್ಸ್ ತಂಡದ ವಿರುದ್ಧ ಹೀನಾಯ ಸೋಲು ಅನುಭವಿಸಿದ ಬಳಿಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮುಖದಲ್ಲಿ ನಿರಾಶೆ ಮಡುಗಟ್ಟಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದ್ದ ಮುಂಬೈ ಇಂಡಿಯನ್ಸ್ ಹಲವು ಅವಕಾಶಗಳನ್ನು ಕೈಚೆಲ್ಲಿ ಫೀಲ್ಡಿಂಗ್ ನಲ್ಲಿ ವಿಫಲವಾದದ್ದು ಸೋಲಿಗೆ ಪ್ರಮುಖ ಕಾರಣ ಎನಿಸಿತು.
ಕೆಕೆಆರ್ ತಂಡದ ರೋವನ್ ಪೊವೆಲ್ ಅವರು ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ 10ನೇ ಓವರ್ ನಲ್ಲಿ ಪುಲ್ ಶಾಟ್ ಹೊಡೆಯುವ ವೇಳೆ ಟಾಪ್ ಎಡ್ಜ್ ಆದಾಗ ಹಾರ್ದಿಕ್ ಮುಖದಲ್ಲಿ ಹತಾಶೆ ಎದ್ದುಕಂಡಿತು.
"ಫೀಲ್ಡಿಂಗ್ ನಲ್ಲಿ ಏನಾಗುತ್ತಿಗೆ ನನಗೆ ಗೊತ್ತಿಲ್ಲ. ನನ್ನ ಪ್ರಕಾರ ಇಡೀ ಸೀಸನ್ ನಲ್ಲಿ ನಮ್ಮ ಫೀಲ್ಡಿಂಗ್ ಕಳಪೆಯಾಗಿತ್ತು. ಹಲವು ಕ್ಯಾಚ್ ಗಳನ್ನು ನಾವು ಕೈಚೆಲ್ಲಿದೆವು. ಬಹುಶಃ ಯಾರೂ ಅದನ್ನು ಬಯಸುವುದಿಲ್ಲ. ಆದರೆ ಅದು ಆಟದ ಅಂಗ. ಅದನ್ನು ಮುಚ್ಚಿಡುವಂಥದ್ದು ಏನೂ ಇಲ್ಲ" ಎಂದು ಪಂದ್ಯದ ಬಳಿಕ ಹಾರ್ದಿಕ್ ವಿಶ್ಲೇಷಿಸಿದರು.
"ನೀವು ಪಂದ್ಯ ಗೆಲ್ಲಬೇಕಾದರೆ ಅವಕಾಶಗಳು ಸಿಕ್ಕಿದಾಗ ಅರೆ ಅವಕಾಶಗಳೂ ಸೇರಿದಂತೆ ಎಲ್ಲ ಅವಕಾಶಗಳನ್ನು ಬಾಚಿಕೊಳ್ಳಬೇಕು. ಆದರೆ ಕ್ಯಾಚ್ ಗಳನ್ನು ಕೈಚೆಲ್ಲಿದಾಗ ಪಂದ್ಯದ ಗತಿಯೇ ಬದಲಾಗುತ್ತದೆ. ಏಕೆಂದರೆ ತಂಡ ಪಂದ್ಯವನ್ನೇ ಚೇಸ್ ಮಾಡುತ್ತಿರುತ್ತದೆ" ಎಂದು ವಿವರಿಸಿದರು.
ಈಡನ್ ಗಾರ್ಡನ್ಸ್ ನಲ್ಲಿ ಸುನಿಲ್ ನರೇನ್ ನೇತೃತ್ವದ ಬೌಲಿಂಗ್ ಕೌಶಲದಿಂದ ನಾಲ್ಕು ವಿಕೆಟ್ ಗಳ ಜಯ ಸಾಧಿಸುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇಆಫ್ ಕನಸು ಜೀವಂತವಾಗಿ ಇದೆ.






