ಭಾರತದ ಸೋಲಿಗೆ ಕಳಪೆ ಫೀಲ್ಡಿಂಗ್ ಕಾರಣ: ಕಿರಣ್ ಮೋರೆ

PC : PTI
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ನ ಮಾಜಿ ಆಯ್ಕೆಗಾರ ಹಾಗೂ ವಿಕೆಟ್ ಕೀಪರ್ ಕಿರಣ್ ಮೋರೆ ಅವರು ಇಂಗ್ಲೆಂಡ್ ವಿರುದ್ಧ ಹೆಡ್ಡಿಂಗ್ಲೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು 5 ವಿಕೆಟ್ಗಳಿಂದ ಸೋತಿರುವ ಭಾರತದ ಟೆಸ್ಟ್ ತಂಡ ತಾಳ್ಮೆಯಿಂದಿರುವಂತೆ ವಿನಂತಿಸಿದ್ದಾರೆ. ಸೋಲಿಗೆ ಫೀಲ್ಡಿಂಗ್ ವೈಫಲ್ಯ ಪ್ರಮುಖ ಕಾರಣ ಎಂದು ಬೆಟ್ಟು ಮಾಡಿದ್ದಾರೆ.
‘‘ನಾವು 4 ದಿನಗಳ ಕಾಲ ಚೆನ್ನಾಗಿಯೇ ಆಡಿದ್ದೇವೆ. ನಮ್ಮ ಸ್ಕೋರ್ ಗೆ ಇನ್ನೂ 100-150 ರನ್ ಸೇರಿಸಬೇಕಿತ್ತು. ಮೊದಲ ಇನಿಂಗ್ಸ್ ನಲ್ಲಿ 450 ರನ್ ಗಳಿಸಿದ್ದರೆ ಫಲಿತಾಂಶ ಭಿನ್ನವಾಗಿರುತ್ತಿತ್ತು. 2ನೇ ಇನಿಂಗ್ಸ್ ನಲ್ಲಿ ರಿಷಭ್ ಹಾಗೂ ರಾಹುಲ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆದರೆ ಮತ್ತೊಮ್ಮೆ ನಾವು ಪ್ರಮುಖ ಹಂತದಲ್ಲಿ ಕುಸಿತ ಕಂಡೆವು. ಇಂಗ್ಲೆಂಡ್ ಅತ್ಯುತ್ತಮ ಕ್ರಿಕೆಟ್ ಆಡುತ್ತಿದ್ದಾಗ ಕೊನೆಯ ದಿನದಾಟದಲ್ಲಿ ತಪ್ಪು ನಡೆದಿದೆ. ಫೀಲ್ಡಿಂಗ್ನಲ್ಲಿ ನಾವು ಎಡವಿದ್ದೇವೆ. ಅವೆಲ್ಲವೂ ಸುಲಭ ಕ್ಯಾಚ್ ಆಗಿದ್ದವು. ಅದನ್ನು ಯಾರೂ ಕೈಬಿಡಲಾರರು. ಸೋಲಿಗೆ ಅದುವೇ ಕಾರಣವಾಗಿದೆ’’ ಎಂದು ಮೋರೆ ಹೇಳಿದ್ದಾರೆ.
ಇಂಗ್ಲೆಂಡ್ ತಂಡವು 371 ರನ್ ಗುರಿಯನ್ನು ಯಶಸ್ವಿಯಾಗಿ ಚೇಸ್ ಮಾಡಿ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಬೆನ್ ಡಕೆಟ್ 149 ರನ್ ಗಳಿಸಿದರೆ, ಜೋ ರೂಟ್ ಔಟಾಗದೆ 53 ರನ್, ಜೆಮೀ ಸ್ಮಿತ್ ಔಟಾಗದೆ 44 ರನ್ ಗಳಿಸಿದರು.





