ಕ್ರಿಸ್ ಗೇಲ್ರ ಟಿ20 ವಿಶ್ವ ದಾಖಲೆ ಮುರಿದ ಪೂರನ್

ನಿಕೊಲಸ್ ಪೂರನ್ , ಗೇಲ್ | PC : X
ಹೊಸದಿಲ್ಲಿ : ಟಿ20 ಕ್ರಿಕೆಟ್ನ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿರುವ ವೆಸ್ಟ್ಇಂಡೀಸ್ ಬ್ಯಾಟರ್ ನಿಕೊಲಸ್ ಪೂರನ್ ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಶನಿವಾರ ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್)ಪಂದ್ಯದ ವೇಳೆ ಪೂರನ್ ಅವರು ಗೇಲ್ ಹೆಸರಲ್ಲಿದ್ದ ಮಹಾನ್ ದಾಖಲೆ ಮುರಿದಿದ್ದಾರೆ.
ಟ್ರಿನಿಬಾಗೊ ನೈಟ್ ಪರ ಆಡಿರುವ ಪೂರನ್ ಸೈಂಟ್ಕಿಟ್ಸ್ ವಿರುದ್ಧ 43 ಎಸೆತಗಳಲ್ಲಿ 9 ಸಿಕ್ಸರ್ಗಳ ಸಹಿತ 97 ರನ್ ಗಳಿಸಿದರು. ತನ್ನ ತಂಡಕ್ಕೆ 44 ರನ್ ಗೆಲುವು ತಂದುಕೊಟ್ಟರು. ಈ ಪ್ರದರ್ಶನದ ಮೂಲಕ ಪೂರನ್ ಅವರು ಒಂದೇ ವರ್ಷದಲ್ಲಿ ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ಸಿಕ್ಸರ್ಗಳನ್ನು ಸಿಡಿಸಿರುವ ಕ್ರಿಸ್ ಗೇಲ್ ದಾಖಲೆಯನ್ನು ಮುರಿದಿದ್ದಾರೆ.
ಪೂರನ್ 2024ರಲ್ಲಿ 139 ಸಿಕ್ಸರ್ಗಳನ್ನು ಸಿಡಿಸಿದರು. 2015ರಲ್ಲಿ ಗೇಲ್ ನಿರ್ಮಿಸಿದ್ದ ದಾಖಲೆ(135 ಸಿಕ್ಸರ್)ಮುರಿದರು. 2012ರಲ್ಲಿ 121 ಸಿಕ್ಸರ್ ಹಾಗೂ 2011ರಲ್ಲಿ 116 ಸಿಕ್ಸರ್ ಸಿಡಿಸಿದ್ದ ಗೇಲ್ ಅಗ್ರ-2ರಲ್ಲಿ ಸ್ಥಾನ ಪಡೆದಿದ್ದರು. ಪೂರನ್ 2024ರಲ್ಲಿ 1,844 ರನ್ ಗಳಿಸಿ ಕ್ಯಾಲೆಂಡರ್ ವರ್ಷದಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.





