ಪ್ರಜ್ಞಾನಂದರ 2 ದಾಖಲೆಗಳನ್ನು ಮುರಿದ ಅರ್ಜೆಂಟೀನದ 11 ವರ್ಷದ ಚೆಸ್ ಪ್ರತಿಭೆ

ಫೌಸ್ಟಿನೊ ಓರೊ | PC : @FIDE_chess
ಹೊಸದಿಲ್ಲಿ, ಸೆ. 27: ಅರ್ಜೆಂಟೀನದ 11 ವರ್ಷದ ಚೆಸ್ ಪ್ರತಿಭೆ ಇಂಟರ್ನ್ಯಾಶನಲ್ ಮಾಸ್ಟರ್ ಫೌಸ್ಟಿನೊ ಓರೊ ಭಾರತದ ಪ್ರಜ್ಞಾನಂದ ರಮೇಶ್ಬಾಬು ಅವರ ಎರಡು ದಾಖಲೆಗಳನ್ನು ಮುರಿದಿದ್ದಾರೆ.
ಮ್ಯಾಡ್ರಿಡ್ನಲ್ಲಿ ನಡೆದ ಲೆಜಂಡ್ಸ್ ಆ್ಯಂಡ್ ಪ್ರಾಡಿಜೀಸ್ 2025 ಪಂದ್ಯಾವಳಿಯಲ್ಲಿ 9ರಲ್ಲಿ 7.5 ಅಂಕಗಳನ್ನು ಗಳಿಸಿ ಓರೊ ಪ್ರಶಸ್ತಿ ಗೆದ್ದಿದ್ದಾರೆ. ಅವರು ಈ ಪಂದ್ಯಾವಳಿಯಲ್ಲಿ ಅಜೇಯವಾಗುಳಿದರು ಮತ್ತು ತನ್ನ ಪ್ರಥಮ ಗ್ರ್ಯಾಂಡ್ಮಾಸ್ಟರ್ ಅರ್ಹತೆ ಗಳಿಸಿದರು.
ಈ ಫಲಿತಾಂಶದೊಂದಿಗೆ, ಓರೊ ಅವರ ನಿರ್ವಹಣೆ ರೇಟಿಂಗ್ 2759ಕ್ಕೆ ಏರಿದೆ. ಇದು 12 ವರ್ಷಕ್ಕಿಂತ ಕೆಳಗಿನ ಆಟಗಾರರೊಬ್ಬರ ಗರಿಷ್ಠ ರೇಟಿಂಗ್ ಆಗಿದೆ. ಅವರ ಅಕ್ಟೋಬರ್ನ ನಿರೀಕ್ಷಿತ ಫಿಡೆ ರೇಟಿಂಗ್ 2509 ಆಗಿದೆ. ಈ ಮೂಲಕ ಅವರು 2,500ರ ಗಡಿಯನ್ನು ದಾಟಿದ 12 ವರ್ಷಕ್ಕಿಂತ ಕೆಳಗಿನ ಮೊದಲ ಆಟಗಾರನಾಗಿದ್ದಾರೆ.
ಅವರು ಈ ಮೂಲಕ ಪ್ರಜ್ಞಾನಂದರ ದಾಖಲೆಯನ್ನು ಒಂದು ತಿಂಗಳ ಅಂತರದಿಂದ ಮುರಿದಿದ್ದಾರೆ. ಪ್ರಜ್ಞಾನಂದ 2017ರ ಸೆಪ್ಟಂಬರ್ನಲ್ಲಿ ಈ ದಾಖಲೆ ಮಾಡಿದ್ದರು. ಅದೂ ಅಲ್ಲದೆ, ಓರೊ ಅವರ 2,509 ರೇಟಿಂಗ್ ಯಾವುದೇ ಆಟಗಾರ 12 ವರ್ಷಕ್ಕಿಂತ ಮೊದಲು ಗಳಿಸಿದ ಅತಿ ಹೆಚ್ಚಿನ ರೇಟಿಂಗ್ ಆಗಿದೆ. ಈ ಮೂಲಕ ಅವರು ಪ್ರಜ್ಞಾನಂದರ ಇನ್ನೊಂದು ದಾಖಲೆಯನ್ನು ಮುರಿದಿದ್ದಾರೆ.
ಮ್ಯಾಡ್ರಿಡ್ನಲ್ಲಿ, ಓರೊ 8ನೇ ಸುತ್ತಿನಲ್ಲಿ 90 ನಡೆಗಳ ಬಳಿಕ ಇಂಟರ್ನ್ಯಾಶನಲ್ ಮಾಸ್ಟರ್ ಪೆಡ್ರೊ ಮಾರ್ಟಿನೇಝ್ರನ್ನು ಸೋಲಿಸಿದರು. ಬಳಿಕ, ತನ್ನ ಅಂತಿಮ ಪಂದ್ಯದಲ್ಲಿ ಪೆರುವಿ ಗ್ರ್ಯಾಂಡ್ಮಾಸ್ಟರ್ ಜೂಲಿಯೊ ಗ್ರಾಂಡ ವಿರುದ್ಧ ಡ್ರಾ ಸಾಧಿಸಿದರು.
ಇನ್ನೊಂದು ಸುತ್ತಿನ ಪಂದ್ಯ ಬಾಕಿಯಿರುವಂತೆಯೇ ಅವರು ಪ್ರಶಸ್ತಿ ಗೆದ್ದರು.







