ಬಾಂಗ್ಲಾ–ವಿಂಡೀಸ್ ಟೆಸ್ಟ್ ಪಂದ್ಯಕ್ಕೆ ಪ್ರಕಾಶ್ ಭಟ್ ಮ್ಯಾಚ್ ರೆಫರಿ
ಜಾವಗಲ್ ಶ್ರೀನಾಥ್ ಬಳಿಕ ಈ ಹುದ್ದೆ ಪಡೆದ ಎರಡನೇ ಭಾರತೀಯ

ಪ್ರಕಾಶ್ ಭಟ್ | Photo Credit : Facebook
ಮುಂಬೈ, ಅ.28: ಸೌರಾಷ್ಟ್ರದ ಮಾಜಿ ಕ್ರಿಕೆಟಿಗ ಪ್ರಕಾಶ್ ಭಟ್, ಬಾಂಗ್ಲಾದೇಶ ಮತ್ತು ವೆಸ್ಟ್ಇಂಡೀಸ್ ನಡುವೆ ಢಾಕಾದಲ್ಲಿ ಬುಧವಾರ ಆರಂಭವಾದ ಮೊದಲ ಟೆಸ್ಟ್ ಪಂದ್ಯದ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದರು.
ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ ಬಳಿಕ ಟೆಸ್ಟ್ ಕ್ರಿಕೆಟ್ನಲ್ಲಿ ಮ್ಯಾಚ್ ರೆಫರಿಯಾಗಿ ಕಾರ್ಯನಿರ್ವಹಿಸಿದ ಎರಡನೇ ಭಾರತೀಯ ಎಂಬ ಹಿರಿಮೆಗೆ ಭಟ್ ಪಾತ್ರರಾದರು.
ಹೊಸದಾಗಿ ರಚಿಸಲಾದ ICC ಅಂತರ್ರಾಷ್ಟ್ರೀಯ ಮ್ಯಾಚ್ ರೆಫರಿಗಳ ಮೂವರು ಸದಸ್ಯರ ಎಮರ್ಜಿಂಗ್ ಪ್ಯಾನೆಲ್ಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ಈ ವರ್ಷದ ಏಪ್ರಿಲ್ನಲ್ಲಿ ಭಟ್ ಅವರನ್ನು ಆಯ್ಕೆ ಮಾಡಿತ್ತು.
ICC ಎಲೈಟ್ ಪ್ಯಾನೆಲ್ನಲ್ಲಿ ಐವರು ಮ್ಯಾಚ್ ರೆಫರಿಗಳಿದ್ದಾರೆ. ಜಾವಗಲ್ ಶ್ರೀನಾಥ್, ಆ್ಯಂಡಿ ಪೈಕ್ರಾಫ್ಟ್, ರಿಚಿ ರಿಚರ್ಡ್ಸನ್, ರಂಜನ್ ಮದುಗಲೆ ಮತ್ತು ಜೆಫ್ ಕ್ರೋವ್ ಈ ಪಟ್ಟಿಯಲ್ಲಿದ್ದಾರೆ. ಹೊಸದಾಗಿ ರಚಿಸಲಾದ ಎಮರ್ಜಿಂಗ್ ಪ್ಯಾನೆಲ್ನ ಮೂವರು ರೆಫರಿಗಳನ್ನು ಈ ವ್ಯವಸ್ಥೆಗೆ ಸೇರಿಸಲಾಗಿದೆ.
2007–08ರಿಂದ ದೇಶೀಯ ಕ್ರಿಕೆಟ್ನಲ್ಲಿ BCCI ಮ್ಯಾಚ್ ರೆಫರಿಯಾಗಿ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. 2018ರಿಂದ ICC ಮ್ಯಾಚ್ ರೆಫರಿಯಾಗಿದ್ದಾರೆ. 2024ರಲ್ಲಿ ICC ಮ್ಯಾಚ್ ರೆಫರಿಗಳ ಎಮರ್ಜಿಂಗ್ ಪ್ಯಾನೆಲ್ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅಂತರ್ರಾಷ್ಟ್ರೀಯ ವೃತ್ತಿಜೀವನದಲ್ಲಿ ಈವರೆಗೆ 48 ಟಿ-20, ಆರು ಏಕದಿನ, ನಾಲ್ಕು ಮಹಿಳೆಯರ ಟಿ-20 ಹಾಗೂ ಮೂರು ಮಹಿಳೆಯರ ಏಕದಿನ ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, 67 ಪ್ರಥಮ ದರ್ಜೆ ಪಂದ್ಯಗಳು ಹಾಗೂ 64 IPL ಪಂದ್ಯಗಳಲ್ಲಿ ಮ್ಯಾಚ್ ರೆಫರಿಯಾಗಿದ್ದಾರೆ.
56 ವರ್ಷದ ಭಟ್ ಅಂಡರ್-19 ಏಕದಿನ ವಿಶ್ವಕಪ್ನ 13 ಪಂದ್ಯಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ನ್ಯೂಝಿಲೆಂಡ್ ನಲ್ಲಿ ನಡೆದ ಆಸ್ಟ್ರೇಲಿಯಾ–ನ್ಯೂಝಿಲೆಂಡ್ ಟಿ-20 ಸರಣಿಯಲ್ಲೂ ಕಾರ್ಯನಿರ್ವಹಿಸಿದ್ದರು.






