ಪ್ಯಾರಿಸ್ ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮತ್ತೊಂದು ಚಿನ್ನದ ಪದಕ
ಹೈಜಂಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಪ್ರವೀಣ್ ಕುಮಾರ್

ಪ್ರವೀಣ್ ಕುಮಾರ್ (Photo:X/@narendramodi)
ಪ್ಯಾರಿಸ್ : ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಶುಕ್ರವಾರ ಭಾರತದ ಪ್ರವೀಣ್ ಕುಮಾರ್ ಪುರುಷರ ಹೈಜಂಪ್ ಟಿ64 ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದರು.
ಆರು ಸ್ಪರ್ಧಿಗಳಿದ್ದ ಫೈನಲ್ ಪಂದ್ಯದಲ್ಲಿ 2.08 ಮೀ.ಎತ್ತರಕ್ಕೆ ಜಿಗಿದ ಪ್ರವೀಣ್ ಕುಮಾರ್ ಜೀವನಶ್ರೇಷ್ಠ ಪ್ರದರ್ಶನ ಹಾಗೂ ನೂತನ ಏಶ್ಯನ್ ದಾಖಲೆಯೊಂದಿಗೆ ಪ್ಯಾರಾಲಿಂಪಿಕ್ಸ್ ನಲ್ಲಿ ಸತತ ಎರಡನೇ ಪದಕ ಗೆದ್ದುಕೊಂಡರು. ಪ್ರವೀಣ್ 2021ರ ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ 2.07 ಮೀ. ಎತ್ತರಕ್ಕೆ ಜಿಗಿದು ಬೆಳ್ಳಿ ಪದಕ ಜಯಿಸಿದ್ದರು.
ಅಮೆರಿಕದ ಡರೆಕ್ ಲೊಸಿಡೆಂಟ್ (2.06 ಮೀ.)ಹಾಗೂ ಉಜ್ಬೇಕಿಸ್ತಾನದ ತೆಮುರ್ಬೆಕ್ ಗಿಯಾರೊವ್(2.03 ಮೀ.) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದಾರೆ.
ಪ್ರವೀಣ್ ಅವರು ಶರದ್ ಕುಮಾರ್ ಹಾಗೂ ಮರಿಯಪ್ಪನ್ ತಂಗವೇಲು ನಂತರ ಪ್ಯಾರಿಸ್ನಲ್ಲಿ ಪದಕ ಗೆದ್ದುಕೊಂಡ ಭಾರತದ ಮೂರನೇ ಹೈಜಂಪ್ ಪಟು ಎನಿಸಿಕೊಂಡಿದ್ದಾರೆ. ಪುರುಷರ ಹೈಜಂಪ್ ಟಿ63 ಸ್ಪರ್ಧೆಯಲ್ಲಿ ಶರದ್ ಬೆಳ್ಳಿ ಪದಕ ಜಯಿಸಿದರೆ, ಮರಿಯಪ್ಪನ್ ಕಂಚು ಜಯಿಸಿದ್ದರು.
ನೊಯ್ಡಾದ 21ರ ಹರೆಯದ ಯುವಕ ಪ್ರವೀಣ್ರ ಒಂದು ಕಾಲು ಹುಟ್ಟಿನಿಂದಲೇ ಚಿಕ್ಕದಿದೆ.
ಭಾರತವು ಪ್ಯಾರಿಸ್ನಲ್ಲಿ ಈ ತನಕ ಆರು ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನ ಪದಕಗಳ ಸಹಿತ ಒಟ್ಟು 26 ಪದಕಗಳನ್ನು ಜಯಿಸಿದೆ. ಪ್ರವೀಣ್ ಮೊದಲ ಸ್ಥಾನ ಪಡೆಯುವುದರೊಂದಿಗೆ ಟೋಕಿಯೊ ಗೇಮ್ಸ್ನಲ್ಲಿನ ಗರಿಷ್ಠ ಚಿನ್ನದ ದಾಖಲೆ(5)ಯನ್ನು ಭಾರತವು ಮುರಿದಿದೆ.







