ಮಹಾರಾಷ್ಟ್ರ ತಂಡದ ಪರ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ ಪೃಥ್ವಿ ಶಾ

ಪೃಥ್ವಿ ಶಾ | PC : PTI
ಹೊಸದಿಲ್ಲಿ, ಆ.21: ಚೆನ್ನೈನಲ್ಲಿ ಮಂಗಳವಾರ ನಡೆದ 2025ರ ಆವೃತ್ತಿಯ ಬುಚಿ ಬಾಬು ಪಂದ್ಯಾವಳಿಯಲ್ಲಿ ಛತ್ತೀಸ್ಗಡ ತಂಡದ ವಿರುದ್ಧ ಮಹಾರಾಷ್ಟ್ರ ಕ್ರಿಕೆಟ್ ತಂಡದ ಪರ ಆಡಿರುವ ತನ್ನ ಮೊದಲ ಪಂದ್ಯದಲ್ಲಿ ಶತಕವನ್ನು ಗಳಿಸುವ ಮೂಲಕ ಪೃಥ್ವಿ ಶಾ ತನ್ನದೇ ಶೈಲಿಯಲ್ಲಿ ಪುನರಾಗಮನ ಮಾಡಿದ್ದಾರೆ.
ಬಲಗೈ ಬ್ಯಾಟರ್ ಶಾ ಇತ್ತೀಚೆಗೆ ಮುಂಬೈ ತಂಡವನ್ನು ತ್ಯಜಿಸಿ ಮಹಾರಾಷ್ಟ್ರ ತಂಡವನ್ನು ಸೇರಿದ್ದರು.
ಅಗ್ರ ಸರದಿಯ ಕುಸಿತಕ್ಕೆ ಒಳಗಾಗಿದ್ದ ಮಹಾರಾಷ್ಟ್ರ ತಂಡಕ್ಕೆ ಆಸರೆಯಾದ ಶಾ 15 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 141 ಎಸೆತಗಳಲ್ಲಿ 111 ರನ್ ಗಳಿಸಿದ್ದರು. ಮಹಾರಾಷ್ಟ್ರ ತಂಡವು ಕೇವಲ 15 ರನ್ ಗೆ 4 ವಿಕೆಟ್ ಗಳನ್ನು ಕಳೆದುಕೊಂಡು ನಾಟಕೀಯ ಕುಸಿತ ಕಂಡಿತು. ಆಗ ಸಚಿನ್ ಧಾಸ್ ಅವರೊಂದಿಗೆ ಶಾ 71 ರನ್ ಜೊತೆಯಾಟ ನಡೆಸಿದರು.
ನಾಯಕ ಅಂಕಿತ್ ಬವಾನೆ ಹಾಗೂ ಋತುರಾಜ್ ಗಾಯಕ್ವಾಡ್ ಬೆನ್ನ್ನುಬೆನ್ನಿಗೆ ಔಟಾದಾಗ ಸಿದ್ದಾರ್ಥ್ ಮ್ಹಾತ್ರೆ ಜೊತೆಗೆ 57 ರನ್ ಸೇರಿಸಿದ ಶಾ ಅವರು ಇನಿಂಗ್ಸ್ ಆಧರಿಸಿದರು.
‘‘ಚೆನ್ನೈ ನನ್ನ ಪಾಲಿಗೆ ವಿಶೇಷವಾದ ಸ್ಥಳ. ಇದು ಮಹಾರಾಷ್ಟ್ರ ತಂಡದ ಪರ ನನ್ನ ಮೊದಲ ಪಂದ್ಯ. 100 ರನ್ ಗಳಿಸಿದ್ದು ನಿಜವಾಗಿಯೂ ವಿಶೇಷವಾದುದು. ರಣಜಿ ಟ್ರೋಫಿ ತನಕ ಇದು ಮುಂದುವರಿಯುವ ವಿಶ್ವಾಸದಲ್ಲಿರುವೆ. ರಣಜಿ ಋತುವಿಗಿಂತ ಮೊದಲು ಇದು ನಿಜವಾಗಿಯೂ ಶ್ರೇಷ್ಠ ಪಂದ್ಯಾವಳಿಯಾಗಿದೆ’’ ಎಂದು 25ರ ವಯಸ್ಸಿನ ಶಾ ಹೇಳಿದ್ದಾರೆ.
ಒಂದೊಮ್ಮೆ ಭಾರತದ ಅಂಡರ್-19 ಕ್ರಿಕೆಟ್ ತಂಡದ ನಾಯಕನಾಗಿದ್ದ ಶಾ ಫಿಟ್ನೆಸ್ ಹಾಗೂ ಫಾರ್ಮ್ ವಿಚಾರಗಳಿಂದ ರಾಷ್ಟ್ರೀಯ ತಂಡದಿಂದ ಹೊರಗುಳಿದರು. 2025ರ ಐಪಿಎಲ್ ಆಟಗಾರರ ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಇದೀಗ ಮಹಾರಾಷ್ಟ್ರ ತಂಡದ ಪರ ಚೊಚ್ಚಲ ಶತಕ ಗಳಿಸಿ ದೇಶೀಯ ಋತುವಿನಲ್ಲಿ ಶುಭಾರಂಭ ಮಾಡಿದ್ದಾರೆ.







