ಲೈಂಗಿಕ ಕಿರುಕುಳ ಅರ್ಜಿಯ ಕುರಿತು ಪ್ರತಿಕ್ರಿಯಿಸಲು ವಿಫಲ: ಕ್ರಿಕೆಟಿಗ ಪೃಥ್ವಿ ಶಾಗೆ 100ರೂ. ದಂಡ ವಿಧಿಸಿದ ನ್ಯಾಯಾಲಯ

ಪೃಥ್ವಿ ಶಾ | PC : PTI
ಮುಂಬೈ: ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ದಾಖಲಿಸಿರುವ ಲೈಂಗಿಕ ಕಿರುಕುಳ ಅರ್ಜಿಯ ಕುರಿತು ಪ್ರತಿಕ್ರಿಯಿಸಿಲು ವಿಫಲವಾದ ಆರೋಪದ ಮೇಲೆ ಭಾರತೀಯ ಕ್ರಿಕೆಟಿಗ ಪೃಥ್ವಿ ಶಾಗೆ ಮುಂಬೈನ ಸೆಷನ್ಸ್ ನ್ಯಾಯಾಲಯವೊಂದು 100 ರೂ. ದಂಡ ವಿಧಿಸಿದೆ.
ಈ ಹಿಂದಿನ ಮ್ಯಾಜಿಸ್ಟ್ರೇಟ್ ಆದೇಶವನ್ನು ಪ್ರಶ್ನಿಸಿ ಸಪ್ನಾ ಗಿಲ್ ಅವರು ದಿಂಡೋಷಿ ಸೆಷನ್ಸ್ ನ್ಯಾಯಾಲಯಕ್ಕೆ ಎಪ್ರಿಲ್ 2024ರಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೂ ಮುನ್ನ, ಪೃಥ್ವಿ ಶಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಲು ನಿರಾಕರಿಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಕೇವಲ ಪ್ರಾಥಮಿಕ ವಿಚಾರಣೆಗೆ ಆದೇಶಿಸಿತ್ತು.
ಸಪ್ನಾ ಗಿಲ್ ಮೇಲ್ಮನವಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಸೆಷನ್ಸ್ ನ್ಯಾಯಾಲಯ ಪದೇ ಪದೇ ಪೃಥ್ವಿ ಶಾಗೆ ಸೂಚಿಸಿತ್ತು. ಕಳೆದ ಬಾರಿಯ ವಿಚಾರಣೆಯ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಲು ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ಪೃಥ್ವಿ ಶಾಗೆ ನ್ಯಾಯಾಲಯ ಎಚ್ಚರಿಸಿತ್ತು.
ಆದರೆ, ಇದುವರೆಗೂ ಪೃಥ್ವಿ ಶಾ ಯಾವುದೇ ಪ್ರತಿಕ್ರಿಯೆ ಸಲ್ಲಿಸದಿರುವುದನ್ನು ಪರಿಗಣಿಸಿದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, “100 ರೂ. ದಂಡ ವಿಧಿಸುವ ಮೂಲಕ ಮತ್ತೊಂದು ಅವಕಾಶವನ್ನು ನೀಡಲಾಗಿದೆ” ಎಂದು ಹೇಳಿದರು.
ನಂತರ, ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಲಾಯಿತು.







