ಉಸ್ಮಾನ್ ಡೆಂಬೆಲೆ ಮತ್ತು ಐತಾನಾ ಬೊನ್ಮತಿಗೆ 2025ರ ಬ್ಯಾಲನ್ ಡಿ’ಓರ್ ಪ್ರಶಸ್ತಿ

PC | x.com/dembouz
ಪ್ಯಾರಿಸ್: ಫ್ರೆಂಚ್ ಅಂತಾರಾಷ್ಟ್ರೀಯ ಫಾರ್ವರ್ಡ್ ಹಾಗೂ ಪ್ಯಾರಿಸ್ ಸೇಂಟ್-ಜರ್ಮೇನ್ ಕ್ಲಬ್ ನ ತಾರೆ ಉಸ್ಮಾನ್ ಡೆಂಬೆಲೆ 2025ರ ಪುರುಷರ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಮಹಿಳಾ ವಿಭಾಗದಲ್ಲಿ ಬಾರ್ಸಿಲೋನಾದ ಸ್ಪ್ಯಾನಿಷ್ ಅಂತಾರಾಷ್ಟ್ರೀಯ ಐತಾನಾ ಬೊನ್ಮತಿ ಸತತ ಮೂರನೇ ಬಾರಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.
ಫ್ರಾನ್ಸ್ನ ರಾಜಧಾನಿ ಪ್ಯಾರಿಸ್ ನ ಥಿಯೇಟರ್ ಡು ಚಾಟೆಲೆಟ್ ನಲ್ಲಿ ಸೋಮವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಜಗತ್ತಿನ ಅತ್ಯಂತ ಪ್ರತಿಷ್ಠಿತ ಫುಟ್ಬಾಲ್ ವೈಯಕ್ತಿಕ ವಿಭಾಗದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಉಸ್ಮಾನ್ ಡೆಂಬೆಲೆ, ಈ ವರ್ಷದ ಮೇ ತಿಂಗಳಲ್ಲಿ ಪಿಎಸ್ಜಿಗೆ ಇತಿಹಾಸದಲ್ಲೇ ಮೊದಲ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ತಂದುಕೊಟ್ಟ ಪ್ರಮುಖ ಆಟಗಾರರಾಗಿದ್ದಾರೆ. ಬಾರ್ಸಿಲೋನಾದ 17 ವರ್ಷದ ಯುವ ತಾರೆ ಲಮೀನ್ ಯಮಾಲ್ ಲಾ ಲಿಗಾ ಪ್ರಶಸ್ತಿ ಹಾಗೂ ಸ್ಪೇನ್ ಪರ ಯುರೋ 2025 ಗೆಲುವಿನಲ್ಲಿ ನೀಡಿದ ಶ್ರೇಷ್ಠ ಆಟದಿಂದ ತೀವ್ರ ಪೈಪೋಟಿ ಒಡ್ಡಿದ್ದರೂ, ಕೊನೆಯಲ್ಲಿ ಉಸ್ಮಾನ್ ಡೆಂಬೆಲೆ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಇತ್ತ, ಬಾರ್ಸಾದ ಬೊನ್ಮತಿ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಅವರು ಫ್ರೆಂಚ್ ದಂತಕಥೆ ಮೈಕೆಲ್ ಪ್ಲಾಟಿನಿ ಮತ್ತು ಅರ್ಜೆಂಟೀನಾ ಸೂಪರ್ಸ್ಟಾರ್ ಲಿಯೋನೆಲ್ ಮೆಸ್ಸಿ ನಂತರ ಹ್ಯಾಟ್ರಿಕ್ ಬ್ಯಾಲನ್ ಡಿ’ಓರ್ ಪ್ರಶಸ್ತಿ ಜಯಿಸಿದ ಮೂರನೇ ವ್ಯಕ್ತಿಯಾಗಿ ಇತಿಹಾಸ ನಿರ್ಮಿಸಿದರು.
ಉಸ್ಮಾನ್ ಡೆಂಬೆಲೆ ಈ ಗೌರವವನ್ನು ಗಳಿಸಿದ ಆರನೇ ಫ್ರೆಂಚ್ ಆಟಗಾರರಾಗಿದ್ದು, ರೇಮಂಡ್ ಕೋಪಾ, ಪ್ಲಾಟಿನಿ, ಜೀನ್-ಪಿಯರ್ ಪಾಪಿನ್, ಜಿನೆಡಿನ್ ಜಿಡಾನೆ ಮತ್ತು ಕರೀಮ್ ಬೆಂಜೆಮಾ ಅವರ ಕ್ಲಬ್ ಸೇರಿದ್ದಾರೆ.







