ಪಿಎಸ್ಎಲ್ ಕೂಡ ಮೇ 17ರಂದು ಪುನರಾರಂಭ

PC :NDTV
ಲಾಹೋರ್: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) 2025 ಪಂದ್ಯಾವಳಿಯು ಮೇ 17ರಂದು ಪುನರಾರಂಭಗೊಳ್ಳಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಅಧ್ಯಕ್ಷ ಮೊಹ್ಸಿನ್ ನಖ್ವಿ ಮಂಗಳವಾರ ಘೋಷಿಸಿದ್ದಾರೆ. ಪೈನಲ್ ಪಂದ್ಯವು ಮೇ 25ರಂದು ನಡೆಯಲಿದೆ.
‘‘ಎಚ್ಬಿಎಲ್ ಪಿಎಸ್ಎಲ್ ಎಕ್ಸ್ ಪಂದ್ಯಾವಳಿಯು ಎಲ್ಲಿ ನಿಂತಿದೆಯೋ ಅಲ್ಲಿಂದ ಪುನರಾರಂಭಗೊಳ್ಳಲಿದೆ. 6 ತಂಡಗಳು, ಯಾವುದೇ ಭಯವಿಲ್ಲ. ಮೇ 17ರಂದು ಆರಂಭಗೊಳ್ಳಲಿರುವ 8 ರೋಮಾಂಚಕ ಪಂದ್ಯಗಳಿಗಾಗಿ ತಯಾರಾಗಿ. ಭವ್ಯ ಫೈನಲ್ ಪಂದ್ಯವು ಮೇ 25ರಂದು ನಡೆಯಲಿದೆ. ಎಲ್ಲಾ ತಂಡಗಳಿಗೂ ಶುಭಾಶಯಗಳು!’’ ಎಂದು ಪಿಸಿಬಿ ಅಧ್ಯಕ್ಷರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವಾರ ಪಂದ್ಯಾವಳಿಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿತ್ತು.
ಉಳಿದಿರುವ ಪಂದ್ಯಗಳ ಪರಿಷ್ಕೃತ ದಿನಾಂಕಗಳು ಮತ್ತು ಸ್ಥಳಗಳ ಬಗ್ಗೆ ಚರ್ಚಿಸಲು ತಂಡಗಳ ಪ್ರತಿನಿಧಿಗಳೊಂದಿಗೆ ಪಿಎಸ್ಎಲ್ ಸೋಮವಾರ ಮಾತುಕತೆ ನಡೆಸಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ.
ಲೀಗ್ ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಮನೆಗೆ ಮರಳಿದ್ದು, ಅವರ ಪೈಕಿ ಹೆಚ್ಚಿನವರು ಪಂದ್ಯಾವಳಿಗೆ ಮರಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮೇ 17ರಂದು ಪುನರಾರಂಭಗೊಳ್ಳಲಿದೆ.







