ಜಪಾನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿ | ಲಕ್ಷ್ಯ ಸೇನ್; ಸಾತ್ವಿಕ್-ಚಿರಾಗ್ ಜೋಡಿ 2ನೇ ಸುತ್ತಿಗೆ
ಪಿ.ವಿ. ಸಿಂಧೂ ಮೊದಲ ಸುತ್ತಿನಲ್ಲೇ ಹೊರಗೆ

ಪಿ.ವಿ. ಸಿಂಧೂ | PC : PTI
ಟೋಕಿಯೊ, ಜು. 16: ಜಪಾನ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತದ ಲಕ್ಷ್ಯ ಸೇನ್ ಹಾಗೂ ಡಬಲ್ಸ್ ಜೋಡಿ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬುಧವಾರ ಎರಡನೇ ಸುತ್ತು ತಲುಪಿದ್ದಾರೆ. ಆದರೆ, ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಮಹಿಳೆಯರ ಸಿಂಗಲ್ಸ್ನಲ್ಲಿ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರಬಿದ್ದರು.
ಮಾಜಿ ವಿಶ್ವ ಚಾಂಪಿಯನ್ ಆಗಿರುವ 30 ವರ್ಷದ ಸಿಂಧೂ ಮೊದಲ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯದ ಸಿಮ್ ಯು ಜಿನ್ ವಿರುದ್ಧ 15-21, 14-21 ಗೇಮ್ ಗಳಿಂದ ಸೋಲನುಭವಿಸಿದರು. ಇದು ಈ ವರ್ಷದಲ್ಲಿ ಅವರ ಐದನೇ ಮೊದಲ ಸುತ್ತಿನ ನಿರ್ಗಮನವಾಗಿದೆ.
ಪುರುಷರ ಡಬಲ್ಸ್ ನಲ್ಲಿ, 15ನೇ ವಿಶ್ವ ರ್ಯಾಂಕಿಂಗ್ ನ ಸಾತ್ವಿಕ್ ಮತ್ತು ಚಿರಾಗ್ ದಕ್ಷಿಣ ಕೊರಿಯದ ಕಾಂಗ್ ಮಿನ್ ಹಯೂಕ್ ಮತ್ತು ಕಿಮ್ ಡಾಂಗ್ ಜು ಜೋಡಿಯನ್ನು 42 ನಿಮಿಷಗಳಲ್ಲಿ 21-18, 21-10 ಗೇಮ್ ಗಳಿಂದ ಮಣಿಸಿದರು.
ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ, 18ನೇ ವಿಶ್ವ ರ್ಯಾಂಕಿಂಗ್ ನ ಲಕ್ಷ್ಯ ಸೇನ್ ಚೀನಾದ ಝೆಂಗ್ ಕ್ಸಿಂಗ್ ರನ್ನು 21-11, 21-18 ಗೇಮ್ ಗಳಿಂದ ಪರಾಭವಗೊಳಿಸಿದರು.
ಅವರು ಪ್ರಿಕ್ವಾರ್ಟರ್ಫೈನಲ್ನಲ್ಲಿ ಏಳನೇ ಶ್ರೇಯಾಂಕದ ಜಪಾನ್ ಕೊಡೈ ನರವೊಕರನ್ನು ಎದುರಿಸಲಿದ್ದಾರೆ.







