ನಾಳೆ ಕ್ವಾರ್ಟರ್ ಫೈನಲ್: ಭಾರತದ ಹಾಕಿ ತಂಡಕ್ಕೆ ಬ್ರಿಟನ್ ಎದುರಾಳಿ

PC : PTI
ಪ್ಯಾರಿಸ್: ತನ್ನ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ರವಿವಾರ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ನಡೆಯುವ ಪುರುಷರ ಹಾಕಿ ಸ್ಪರ್ಧಾವಳಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ತಂಡವನ್ನು ಎದುರಿಸಲಿದೆ.
ಟೋಕಿಯೊ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತ ಆಸ್ಟ್ರೇಲಿಯವನ್ನು ಶುಕ್ರವಾರ 3-2 ಅಂತರದಿಂದ ಮಣಿಸಿದ್ದ ಭಾರತವು ಅದೇ ಪ್ರದರ್ಶನ ಮುಂದುವರಿಸುವ ವಿಶ್ವಾಸದಲ್ಲಿದೆ. ಭಾರತವು 52 ವರ್ಷಗಳ ನಂತರ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿ ಆಸ್ಟ್ರೇಲಿಯವನ್ನು ಸೋಲಿಸಿತ್ತು.
ಆಸ್ಟ್ರೇಲಿಯ ವಿರುದ್ಧ ಮಹತ್ವದ ಗೆಲುವು ದಾಖಲಿಸಿರುವ ಭಾರತವು ಬಿ ಗುಂಪಿನಲ್ಲಿ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಬೆಲ್ಜಿಯಮ್ ನಂತರ ಎರಡನೇ ಸ್ಥಾನ ಪಡೆದಿದೆ. ಗ್ರೇಟ್ ಬ್ರಿಟನ್ ಎ ಗುಂಪಿನಲ್ಲಿ 3ನೇ ಸ್ಥಾನ ಪಡೆದಿದೆ.
ಮನ್ಪ್ರೀತ್ ಸಿಂಗ್ ಹಾಗೂ ಉಪ ನಾಯಕ ಹಾರ್ದಿಕ್ ಸಿಂಗ್ ನಾಯಕತ್ವದಲ್ಲಿ ಭಾರತವು ಮಿಡ್ ಫೀಲ್ಡ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಫಾರ್ವರ್ಡ್ ಲೈನ್ನಲ್ಲಿ ಗುರ್ಜಂತ್ ಸಿಂಗ್ ಹಾಗೂ ಸುಖಜೀತ್ ಸಿಂಗ್ ಮಿಂಚುತ್ತಿದ್ದಾರೆ. ಅಭಿಷೇಕ್ ಪ್ರಮುಖವಾಗಿ ಫಾರ್ವರ್ಡ್ ಲೈನ್ನಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು ಪಂದ್ಯಾವಳಿಯಲ್ಲಿ ತನ್ನ 2ನೇ ಗೋಲು ಗಳಿಸಿ ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮುನ್ನಡೆ ಒದಗಿಸಿಕೊಟ್ಟಿದ್ದರು.
ನಾಯಕ ಹರ್ಮನ್ಪ್ರೀತ್ ಸಿಂಗ್ ಪಂದ್ಯಾವಳಿಯಲ್ಲಿ ಒಟ್ಟು ಆರು ಗೋಲುಗಳನ್ನು ಗಳಿಸುವ ಮೂಲಕ ಭಾರತದ ಗೆಲುವಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.
ಡಿಫೆನ್ಸ್ ವಿಭಾಗದಲ್ಲಿ ಅಮಿತ್ ರೋಹಿದಾಸ್ ಪ್ರಬಲ ಪ್ರದರ್ಶನ ನೀಡುತ್ತಿದ್ದು, ತನ್ನ ಕೊನೆಯ ಅಂತರ್ರಾಷ್ಟ್ರೀಯ ಟೂರ್ನಿ ಆಡುತ್ತಿರುವ ಹಿರಿಯ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಹಲವು ಗೋಲುಗಳನ್ನು ತಡೆದಿದ್ದರು. ಗ್ರೇಟ್ ಬ್ರಿಟನ್ ವಿರುದ್ಧ ಭಾರತವು ಶ್ರೀಜೇಶ್ರನ್ನು ಹೆಚ್ಚು ಅವಲಂಬಿಸಿದೆ.
ಭಾರತದ ಹಾಕಿ ತಂಡಕ್ಕೆ ಸತತ ಎರಡನೇ ಒಲಿಂಪಿಕ್ಸ್ ಪದಕ ಗೆಲ್ಲಲು ಕೇವಲ ಎರಡು ಗೆಲುವಿನ ಅಗತ್ಯವಿದ್ದು, ಭಾರತದ ಮುಖ್ಯ ಕೋಚ್ ಕ್ರೆಗ್ ಫುಲ್ಟನ್ ಭಾರೀ ಆಶಾವಾದಿಯಾಗಿದ್ದಾರೆ.
ಇದೇ ವೇಳೆ ಉಳಿದಿರುವ ಕ್ವಾರ್ಟರ್ ಫೈನಲ್ಗಳಲ್ಲಿ ಬೆಲ್ಜಿಯಮ್ ತಂಡ ಸ್ಪೇನ್, ಆಸ್ಟ್ರೇಲಿಯ ತಂಡವು ನೆದರ್ಲ್ಯಾಂಡ್ಸ್ ಹಾಗೂ ಜರ್ಮನಿ ತಂಡವು ಅರ್ಜೆಂಟೀನ ತಂಡವನ್ನು ಎದುರಿಸಲಿದೆ.







