ಕ್ವೀನ್ಸ್ ಕ್ಲಬ್ ಟೆನಿಸ್ ಟೂರ್ನಮೆಂಟ್: ಕಾರ್ಲೊಸ್ ಅಲ್ಕರಾಝ್ ಚಾಂಪಿಯನ್

ಲಂಡನ್: ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ರನ್ನು 6-4, 6-4 ನೇರ ಸೆಟ್ಗಳ ಅಂತರದಿಂದ ಮಣಿಸಿದ ಕಾರ್ಲೊಸ್ ಅಲ್ಕರಾಝ್ ಕ್ವೀನ್ಸ್ ಕ್ಲಬ್ ಟೆನಿಸ್ ಟೂರ್ನಮೆಂಟ್ನಲ್ಲಿ ಚಾಂಪಿಯನ್ಪಟ್ಟಕ್ಕೇರಿದರು.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಜಯ ಸಾಧಿಸಿರುವ ಸ್ಪೇನ್ ಆಟಗಾರ ಈ ಋತುವಿನಲ್ಲಿ ಐದನೇ ಪ್ರಶಸ್ತಿಯನ್ನು ಬಾಚಿಕೊಂಡು ವಿಶ್ವ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದರು. ಹುಲ್ಲುಹಾಸಿನ ಅಂಗಣದಲ್ಲಿ ಮೊದಲ ಬಾರಿ ಪ್ರಶಸ್ತಿ ಜಯಿಸಿರುವ ಅಲ್ಕರಾಝ್ ಮುಂದಿನ ತಿಂಗಳು ನಡೆಯಲಿರುವ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ನೊವಾಕ್ ಜೊಕೊವಿಕ್ 8ನೇ ಬಾರಿ ಪ್ರಶಸ್ತಿ ಗೆಲ್ಲಬಲ್ಲ ಫೇವರಿಟ್ ಆಟಗಾರನಾಗಿಯೇ ಉಳಿದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅಲ್ಕರಾಝ್ ವೃತ್ತಿಜೀವನದಲ್ಲಿ ಮೂರನೇ ಬಾರಿ ಹುಲ್ಲುಹಾಸಿನ ಅಂಗಣದಲ್ಲಿ ಆಡಿದರು. ಮೊದಲ ಸುತ್ತಿನ ಪಂದ್ಯದಲ್ಲಿ ಸೋಲಿನ ಭೀತಿ ಎದುರಿಸಿದ್ದ ಯುಎಸ್ ಓಪನ್
ಚಾಂಪಿಯನ್ ಮುಂದಿನ 4 ಪಂದ್ಯಗಳಲ್ಲಿ ಸೆಟನ್ನು ಕಳೆದುಕೊಳ್ಳದೆ ಉತ್ತಮ ಪ್ರದರ್ಶನ ನೀಡಿದರು. ಈ ಬಾರಿಯ ವಿಂಬಲ್ಡನ್ನಲ್ಲಿ ಮೊದಲ ಬಾರಿ 4ನೇ ಸುತ್ತು ದಾಟುವ ವಿಶ್ವಾಸದಲ್ಲಿದ್ದಾರೆ.





