ವಿಶ್ವಕಪ್ ನಂತರ ಏಕದಿನ ಕ್ರಿಕೆಟ್‌ನಿಂದ ಕ್ವಿಂಟನ್ ಡಿಕಾಕ್ ನಿವೃತ್ತಿ

ಜೋಹಾನ್ಸ್‌ಬರ್ಗ್, ಸೆ.5: ಭಾರತದಲ್ಲಿ ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯುವ ಐಸಿಸಿ ಏಕದಿನ ವಿಶ್ವಕಪ್ ನಂತರ ಕ್ವಿಂಟನ್ ಡಿಕಾಕ್ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಂಗಳವಾರ ದೃಢಪಡಿಸಿದೆ. ವಿಶ್ವಕಪ್ ಟೂರ್ನಿಗೆ ತಂಡವನ್ನು ಪ್ರಕಟಿಸುವ ವೇಳೆ ಈ ವಿಚಾರ ತಿಳಿಸಿದೆ.
ಡಿಕಾಕ್ 2021ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ದಕ್ಷಿಣ ಆಫ್ರಿಕಾ ತಂಡದಲ್ಲಿ ಟಿ-20 ಕ್ರಿಕೆಟ್ ಆಡುವುದನ್ನು ಮುಂದುವರಿಸಲಿದ್ದಾರೆ.
ಭಾರತ ವಿರುದ್ಧದ ಸರಣಿ ನಡೆಯುತ್ತಿರುವಾಗಲೇ ಡಿಕಾಕ್ ಟೆಸ್ಟ್ ಕ್ರಿಕೆಟ್‌ನಿಂದ ದಿಢೀರನೇ ನಿವೃತ್ತಿ ಪ್ರಕಟಿಸಿದ್ದರು. ಕುಟುಂಬದೊಂದಿಗೆ ಸಮಯ ಕಳೆಯಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದರು. ಈ ಬಾರಿ 30ರ ಹರೆಯದ ಎಡಗೈ ಬ್ಯಾಟರ್ ಅಂತಹ ಯಾವುದೇ ಹೇಳಿಕೆ ನೀಡಿಲ್ಲ.
ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಅವರ ನಿರ್ಧಾರವನ್ನು ನಾವು ಅರ್ಥ ಮಾಡಿಕೊಳ್ಳಬಲ್ಲೆವು. ಹಲವು ವರ್ಷಗಳಿಂದ ಅವರು ನೀಡಿರುವ ಸೇವೆಗೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಅವರಿಗೆ ಮುಂದಿನ ಭವಿಷ್ಯದ ಬಗ್ಗೆ ಶುಭ ಹಾರೈಸುತ್ತೇವೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ನಿರ್ದೇಶಕರಾದ ಎನೊಚ್ ಎನ್‌ಕ್ವೆ ಹೇಳಿದ್ದಾರೆ.
ಓರ್ವ ಶ್ರೇಷ್ಠ ಬ್ಯಾಟರ್ ಆಗಿರುವ ಡಿಕಾಕ್ 140 ಏಕದಿನ ಪಂದ್ಯಗಳಲ್ಲಿ 44.86ರ ಸರಾಸರಿಯಲ್ಲಿ 5966 ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಕ್ರಿಕೆಟ್‌ನಲ್ಲಿ ಸೀಮಿತ ಓವರ್ ಕ್ರಿಕೆಟ್‌ನ ಓಪನರ್ ಆಗಿರುವ ಡಿಕಾಕ್ 17 ಏಕದಿನ ಶತಕ ಸಿಡಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಶ್ವಕಪ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ದಕ್ಷಿಣ ಆಫ್ರಿಕಾದ ಪಾಲಿಗೆ ಡಿಕಾಕ್ ಪ್ರಮುಖ ಆಟಗಾರನಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡ: ಟೆಂಬಾ ಬವುಮಾ(ನಾಯಕ), ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿಕಾಕ್, ರೀಝಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸನ್, ಹೆನ್ರಿಕ್ ಕ್ಲಾಸೆನ್, ಸಿಸಂದ ಮಗಲಾ, ಕೇಶವ ಮಹಾರಾಜ್, ಮರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಗಿಡಿ, ಅನ್ರಿಚ್ ನಾರ್ಟ್ಜೆ, ತಬ್ರೈಝ್ ಶಮ್ಸಿ, ರಾಸ್ಸಿ ವಾನ್‌ಡರ್ ಡುಸ್ಸೆನ್.







