ಬಿಗ್ ಬ್ಯಾಶ್ ಲೀಗ್‌ನಿಂದ ಹೊರಗುಳಿದ ಆರ್.ಅಶ್ವಿನ್

ಹೊಸದಿಲ್ಲಿ, ನ.4: ಚೆನ್ನೈನಲ್ಲಿ ನಡೆದ ತರಬೇತಿಯ ವೇಳೆ ಮೊಣಕಾಲಿನ ನೋವಿಗೆ ಒಳಗಾಗಿರುವ ಭಾರತದ ಮಾಜಿ ಆಲ್‌ರೌಂಡರ್ ಆರ.ಅಶ್ವಿನ್ ಮುಂಬರುವ ಆಸ್ಟ್ರೇಲಿಯದ ಬಿಗ್ ಬ್ಯಾಶ್ ಲೀಗ್(ಬಿಬಿಎಲ್)ನಿಂದ ಹೊರಗುಳಿದಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಅಶ್ವಿನ್ ಅವರು ತನ್ನ ಗಾಯದ ಬಗ್ಗೆ ಮಾಹಿತಿ ನೀಡಿದರು.
‘‘ಮುಂಬರುವ ಋತುವಿಗೆ ತಯಾರಿ ನಡೆಸಲು ಚೆನ್ನೈನಲ್ಲಿ ತರಬೇತಿ ಪಡೆಯುತ್ತಿದ್ದಾಗ ನನ್ನ ಮೊಣಕಾಲಿಗೆ ನೋವುಂಟಾಯಿತು. ನನಗೆ ಚಿಕಿತ್ಸೆ ನೀಡಲಾಗಿದು, 15ನೇ ಆವೃತ್ತಿಯ ಬಿಬಿಎಲ್‌ನಿಂದ ವಂಚಿತನಾಗಲಿದ್ದೇನೆ. ಅದನ್ನು ಹೇಳುವುದು ಕಷ್ಟವಾಗುತ್ತದೆ. ಬಿಬಿಎಲ್ ಭಾಗವಾಗಲು, ನಿಮ್ಮೆಲ್ಲರ ಮುಂದೆ ಆಡಲು ನಾನು ನಿಜವಾಗಿಯೂ ಉತ್ಸುಕನಾಗಿದ್ದೆ’’ ಎಂದು ಅಶ್ವಿನ್ ಬರೆದಿದ್ದಾರೆ.
ಸಿಡ್ನಿ ಥಂಡರ್ ಫ್ರಾಂಚೈಸಿಯೊಂದಿಗೆ ಸಹಿ ಹಾಕಿದ ನಂತರ ಅಶ್ವಿನ್ ಅವರು ಬಿಬಿಎಲ್ ಕ್ಲಬ್‌ಗೆ ಸೇರ್ಪಡೆಯಾಗಿ ಭಾರತವನ್ನು ಪ್ರತಿನಿಧಿಸಿದ ಮೊದಲ ಪುರುಷ ಆಟಗಾರನಾಗಲು ಸಜ್ಜಾಗಿದ್ದರು.
‘‘ಪಂದ್ಯಾವಳಿಯ ವೇಳೆ ನಾನು ಸಿಡ್ನಿ ಥಂಡರ್ ತಂಡವನ್ನು ಬೆಂಬಲಿಸುವೆ. ಈ ವರ್ಷಾಂತ್ಯದಲ್ಲಿ ತಂಡವನ್ನು ಉತ್ತೇಜಿಸಲು ಆಸ್ಟ್ರೇಲಿಯಕ್ಕೆ ಪ್ರಯಾಣಿಸಲು ಪ್ರಯತ್ನಿಸುವೆ’’ಎಂದು 39ರ ವಯಸ್ಸಿನ ಅಶ್ವಿನ್ ಹೇಳಿದರು.





