ಬೀಳ್ಕೊಡುಗೆ ಸಮಾರಂಭದಲ್ಲಿ ರಫೆಲ್ ನಡಾಲ್ ಗೆ ಗೌರವ; ರೋಜರ್ ಫೆಡರರ್, ಜೊಕೊವಿಕ್, ಆ್ಯಂಡಿ ಮರ್ರೆ ಉಪಸ್ಥಿತಿ

PC : X \ @RafaelNadal
ಪ್ಯಾರಿಸ್: ಹಲವು ವರ್ಷಗಳಿಂದ ಭಾರೀ ಪ್ರಶಂಸೆ, ಚಪ್ಪಾಳೆ ಹಾಗೂ ‘ರಾಫಾ’ ಘೋಷಣೆಗಳಿಗೆ ಸಾಕ್ಷಿಯಾಗಿದ್ದ ಕೋರ್ಟ್ ಫಿಲಿಪ್ ಚಾಟ್ರಿಯರ್ ಗೆ ರಫೆಲ್ ನಡಾಲ್ ರವಿವಾರ ಕಾಲಿಟ್ಟರು. 14 ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಶಿಪ್ಗಳನ್ನು ಜಯಿಸುವುದರೊಂದಿಗೆ ದಾಖಲೆ ನಿರ್ಮಿಸಿ ‘ಕಿಂಗ್ ಆಫ್ ಕ್ಲೇ ಕೋರ್ಟ್’ಆಗಿ ಗುರುತಿಸಿಕೊಂಡಿರುವ ನಡಾಲ್ ಅವರನ್ನು ಈ ಬಾರಿ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು.
ಕಳೆದ ವರ್ಷ ನಿವೃತ್ತಿಯಾಗಿರುವ ನಡಾಲ್ ಗೆ ಸಾವಿರಾರು ಪ್ರೇಕ್ಷಕರು ಎದ್ದುನಿಂತು ಗೌರವಿಸಿದರು. ನಡಾಲ್ ಅವರು ಕಪ್ಪುಬಣ್ಣದ ಸೂಟ್ ಹಾಗೂ ಕಪ್ಪು ಬಣ್ಣದ ಶರ್ಟ್ ಧರಿಸಿದ್ದರು. 15 ಸಾವಿರ ಪ್ರೇಕ್ಷಕರ ಸಾಮರ್ಥ್ಯವಿರುವ ಕ್ರೀಡಾಂಗಣದಲ್ಲಿ ನೆರೆದಿದ್ದ ತನ್ನ ಅಭಿಮಾನಿಗಳತ್ತ ನಗುಮುಖದೊಂದಿಗೆ ನಡಾಲ್ ಕೈಬೀಸಿದರು.
‘‘ಎಲ್ಲರಿಗೂ ಶುಭ ಸಂಜೆ. ಕಳೆದ 20 ವರ್ಷಗಳಿಂದ ಈ ಕೋರ್ಟ್ ನಲ್ಲಿ ಆಡಿದ ನಂತರ ನನಗೆ ಎಲ್ಲಿಂದ ಮಾತು ಆರಂಭಿಸಬೇಕೆಂದು ಗೊತ್ತಾಗುತ್ತಿಲ್ಲ. ವಿಶೇಷವಾಗಿ ನಾನು ಇಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಚೆನ್ನಾಗಿ ಆಡಿದ್ದೇನೆ’’ ಎಂದು ನಡಾಲ್ ಫ್ರೆಂಚ್ ಭಾಷೆಯಲ್ಲಿ ಹೇಳಿದರು.
ನಡಾಲ್ ಫ್ರೆಂಚ್ ಓಪನ್ ನಲ್ಲಿ 116 ಪಂದ್ಯಗಳಲ್ಲಿ 112ರಲ್ಲಿ ಜಯ ಸಾಧಿಸಿದ್ದು ಕೇವಲ 4ರಲ್ಲಿ ಸೋತಿದ್ದಾರೆ. 14 ಫೈನಲ್ ಗಳಲ್ಲಿ ಸೋಲನ್ನೇ ಕಂಡಿರಲಿಲ್ಲ. ಹೀಗಾಗಿಯೇ ನಡಾಲ್ ಸಕ್ರಿಯ ಆಟಗಾರನಾಗಿದ್ದಾಗಲೇ ಚಾಟ್ರಿಯರ್ ಕ್ರೀಡಾಂಗಣದ ಹೊರಗೆ ನಡಾಲ್ ಅವರ ಬೃಹತ್ ಉಕ್ಕಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ.
ಜೂನ್ 3ರಂದು 39ನೇ ವರ್ಷಕ್ಕೆ ಕಾಲಿಡಲಿರುವ ನಡಾಲ್ ಅವರು ಪಂದ್ಯಾವಳಿಯ ಆಯೋಜಕರು, ತನ್ನ ಕೋಚ್ಗಳಿಗೆ ಧನ್ಯವಾದ ತಿಳಿಸಿದರು. ನಡಾಲ್ ಅವರ ಹೆತ್ತವರು, ಪತ್ನಿ, 2 ವರ್ಷದ ಪುತ್ರ ಈ ವೇಳೆ ಉಪಸ್ಥಿತರಿದ್ದರು. ನಡಾಲ್ ಅವರ ಎದುರಾಳಿಗಳಾಗಿದ್ದ-ರೋಜರ್ ಫೆಡರರ್, ನೊವಾಕ್ ಜೊಕೊವಿಕ್ ಹಾಗೂ ಆ್ಯಂಡಿ ಮರ್ರೆ ಅವರು ಟೆನಿಸ್ ಕೋರ್ಟ್ ನಲ್ಲಿ ನಡಾಲ್ ರನ್ನು ಸೇರಿಕೊಂಡು ಆಲಿಂಗಿಸಿದರು.







