ಕೆಎಸ್ಸಿಎ ಟಿ20 ಹರಾಜಿನಲ್ಲಿ ಮಾರಾಟವಾಗದ ದ್ರಾವಿಡ್ ಪುತ್ರ!

Photo:x
ಬೆಂಗಳೂರು: ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಹರಾಜಿನ ನಾಲ್ಕನೇ ಆವೃತ್ತಿಯಲ್ಲಿ ರಾಜ್ಯದ ಸ್ಟಾರ್ ಬ್ಯಾಟರ್ ದೇವದತ್ ಪಡಿಕ್ಕಲ್ ಅತಿಹೆಚ್ಚು ಮೊತ್ತಕ್ಕೆ ಖರೀದಿಯಾಗಿದ್ದಾರೆ. ಹುಬ್ಬಳ್ಳಿ ಟೈಗರ್ಸ್ ಇವರನ್ನು 13.20 ಲಕ್ಷ ರೂಪಾಯಿಗೆ ಖರೀದಿಸಿದೆ. ಅಭಿನವ್ ಮನೋಹರ್ ಮತ್ತು ಮನೀಶ್ ಪಾಂಡೆ ನಂತರದ ಸ್ಥಾನದಲ್ಲಿದ್ದು, 12.20 ಲಕ್ಷಕ್ಕೆ ಇವರನ್ನು ಕ್ರಮವಾಗಿ ಹುಬ್ಬಳ್ಳಿ ಟೈಗರ್ಸ್ ಮತ್ತು ಮೈಸೂರು ವಾರಿಯರ್ಸ್ ಖರೀದಿಸಿದ್ದಾರೆ.
ಬೌಲರ್ ಗಳ ಪೈಕಿ ಶಿವಮೊಗ್ಗ ಲಯನ್ಸ್ ತಂಡ ವೇಗದ ಬೌಲರ್ ವಿದ್ವತ್ ಕಾವೇರಪ್ಪ ಅವರನ್ನು 10.80 ಲಕ್ಷ ರೂಪಾಯಿಗೆ ಖರೀದಿಸಿದ್ದರೆ, ಬೆಂಗಳೂರು ಬ್ಲಾಸ್ಟರ್ಸ್ ವಿದ್ಯಾಧರ ಪಾಟೀಲ್ ಅವರನ್ನು 8.30 ಲಕ್ಷ ರೂಪಾಯಿಗೆ ಖರೀದಿಸಿದೆ ಎಂದು ಕೆಎಸ್ಸಿಎ ಪ್ರಕಟನೆ ಹೇಳಿದೆ.
ಕಿರಿಯ ಆಟಗಾರರಿಗಾಗಿ ಇರುವ ಸಿ ವರ್ಗದಲ್ಲಿ ಹರಾಜಿಗೆ ಇದ್ದ ರಾಹುಲ್ ದ್ರಾವಿಡ್ ಅವರ ಪುತ್ರ ಸುಮಿತ್ ಮಾರಾಟವಾದ ಆಟಗಾರರ ಅಂತಿಮ ಪಟ್ಟಿಯಲ್ಲಿ ಸೇರಿಲ್ಲ.
ಮೈಸೂರು ವಾರಿಯರ್ಸ್ ಕೆ.ಗೌತಮ್ ಅವರನ್ನು 4.40 ಲಕ್ಷಕ್ಕೆ ಖರೀದಿಸುವ ಮೂಲಕ ಆಲ್ರೌಂಡರ್ ಗಳಿಗೆ ಆಸಕ್ತಿ ತೋರಿದೆ. ಯಶೋಧರನ್ ಪರಂತಪ 2 ಲಕ್ಷ ರೂಪಾಯಿಗೆ ಮೈಸೂರು ಪಾಲಾಗಿದ್ದಾರೆ. ಕಳೆದ ವರ್ಷ ಅತಿಹೆಚ್ಚು ವಿಕೆಟ್ ಪಡೆದ ಕಮಾರ್ ಅವರನ್ನು 1.50 ಲಕ್ಷ ರೂಪಾಯಿಗೆ ಮೈಸೂರು ಸೇರಿಸಿಕೊಂಡಿದ್ದು, ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ 4.70 ಲಕ್ಷ, ವೇಗಿ ವೆಂಕಟೇಶ್ ಎಂ 2 ಲಕ್ಷ, ಗೌತಮ್ ಮಿಶ್ರಾ 2.25 ಲಕ್ಷ ಪಡೆದು ಮೈಸೂರು ವಾರಿಯರ್ಸ್ ತಂಡ ಸೇರಿದ್ದಾರೆ. ಭರವಸೆಯ ವಿಕೆಟ್ ಕೀಪರ್ ಹರ್ಷಿಲ್ ಧರ್ಮಣಿಯವರನ್ನು 3.20 ಲಕ್ಷ ರೂಪಾಯಿಗೆ ಖರೀದಿಸಲಾಗಿದೆ.







