ರಾಹುಲ್-ಜಡೇಜ ನಿರ್ವಹಣೆ ಕೊಹ್ಲಿ ಶತಕದ ಅಬ್ಬರದ ಮುಂದೆ ಮಂಕಾಯಿತು: ಶ್ರೀಕಾಂತ್

ವಿರಾಟ್ ಕೊಹ್ಲಿ | Photo Credit : PTI
ಮುಂಬೈ, ಡಿ. 1: ರಾಂಚಿಯಲ್ಲಿ ರವಿವಾರ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ವಿರಾಟ್ ಕೊಹ್ಲಿ ಬಾರಿಸಿದ ಶತಕವು ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜರ ನಿರ್ವಹಣೆಯನ್ನು ಮಂಕಾಗಿಸಿತು ಎಂದು ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದಾರೆ.
ಪಂದ್ಯದಲ್ಲಿ ಕೊಹ್ಲಿ 135 ರನ್ಗಳನ್ನು ಗಳಿಸಿದರು. ಭಾರತವು ತನ್ನ ಎದುರಾಳಿಯನ್ನು 17 ರನ್ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ಗಳ ನಷ್ಟಕ್ಕೆ 349 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಗೆಲುವಿಗೆ 350 ರನ್ಗಳ ಗುರಿಯನ್ನು ಪಡೆದ ಪ್ರವಾಸಿ ತಂಡವು 332 ರನ್ಗಳಿಗೆ ಸರ್ವಪತನ ಕಂಡಿತು.
ಕೆ.ಎಲ್. ರಾಹುಲ್ (56 ಎಸೆತಗಳಲ್ಲಿ 60 ರನ್) ಮತ್ತು ರವೀಂದ್ರ ಜಡೇಜ (20 ಎಸೆತಗಳಲ್ಲಿ 32 ರನ್) ನಡುವಿನ ಭಾಗೀದಾರಿಕೆಗೆ ಹೆಚ್ಚಿನ ಶ್ರೇಯ ನೀಡಬೇಕಾಗಿತ್ತು ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.
ಕೊಹ್ಲಿ 43ನೇ ಓವರ್ನಲ್ಲಿ ನಿರ್ಗಮಿಸಿದರು. ಬಳಿಕ ನಾಯಕ ರಾಹುಲ್ ಮತ್ತು ಜಡೇಜ ಆರನೇ ವಿಕೆಟ್ಗೆ 65 ರನ್ಗಳನ್ನು ಕೂಡಿಸಿದರು.
ರಾಹುಲ್ರ ‘‘ಸದ್ದುಗದ್ದಲವಿಲ್ಲದ ಕೆಲಸ’’ವು ಕೊಹ್ಲಿಯ ಶತಕದ ಸುತ್ತ ಹುಟ್ಟಿಕೊಂಡ ಆಡಂಬರದ ಮಾತುಗಳಿಂದ ಮಂಕಾಯಿತು ಎಂದು ಶ್ರಿಕಾಂತ್ ಅಭಿಪ್ರಾಯಪಟ್ಟರು.







