ರಾಜಸ್ಥಾನ ರಾಯಲ್ಸ್ ನಾಯಕತ್ವ ಬಗ್ಗೆ ಅಚ್ಚರಿ; ವೈಭವ್ ಸೂರ್ಯವಂಶಿಗೆ ಕಿವಿಮಾತು ಹೇಳಿದ ಬೌಲರ್!

ವೈಭವ್ ಸೂರ್ಯವಂಶಿ | Photo Credit : PTI
ಜೈಪುರ: ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮುನ್ನಡೆಸುವ ಅವಕಾಶವನ್ನು ರಿಯಾನ್ ಪರಾಗ್ ಅವರಿಗೆ ನೀಡಿದ ಬಗ್ಗೆ ಭಾರತ ತಂಡದ ಮಾಜಿ ವೇಗಿ ಲಕ್ಷ್ಮೀಪತಿ ಬಾಲಾಜಿ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ, ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಅವರಂಥ ದಿಗ್ಗಜರಿದ್ದರೂ, ಪರಾಗ್ಗೆ ಅವಕಾಶ ನೀಡಿರುವ ಕ್ರಮವನ್ನು ಬಾಲಾಜಿ ಪ್ರಶ್ನಿಸಿದ್ದಾರೆ. ಜಿಯೋಸ್ಟಾರ್ ಜತೆ ಮಾತನಾಡಿದ ಅವರು, "ಈ ಕ್ರಮ ಒಂದು ಬಗೆಯ ಜೂಜು" ಎಂದು ಬಣ್ಣಿಸಿದ್ದಾರೆ. ಆದಾಗ್ಯೂ ಮುಖ್ಯ ಕೋಚ್ ಕುಮಾರ್ ಸಂಗಕ್ಕಾರ ಅವರ ನೇತೃತ್ವದಲ್ಲಿ ತಂಡ ಹಲವು ಧನಾತ್ಮಕ ಅಂಶಗಳನ್ನು ಹೊಂದಿದೆ ಎಂದು ವಿಶ್ಲೇಷಿಸಿದ್ದಾರೆ.
"ಐಪಿಎಲ್ ತಂಡದ ನಾಯಕತ್ವ ಕೇವಲ ಮೈದಾನದ ನಿರ್ಧಾರಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ; ಡ್ರೆಸ್ಸಿಂಗ್ ರೂಂ ನಿಭಾಯಿಸುವುದೂ ಕೂಡ ಮುಖ್ಯ. ಧ್ವನಿ ಹಾಗೂ ವಿಶ್ವಾಸಾರ್ಹತೆ ಇಲ್ಲಿ ಪ್ರಮುಖ. ಒಂದರ್ಥದಲ್ಲಿ ಇದು ಎರಡು ಅಲುಗಿನ ಕತ್ತಿ. ಆದಾಗ್ಯೂ ಸಂಗಕ್ಕಾರ ಅವರ ಮಾರ್ಗದರ್ಶನದಲ್ಲಿ ಇದು ಯುವ ಆಟಗಾರನಿಗೆ ಮೌಲಿಕ ಕಲಿಕೆಯ ಅವಕಾಶ. ಸಾಧನೆ ಮತ್ತು ನಾಯಕತ್ವದ ಸಮತೋಲನವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರೆ, ಅದು ನಿಜಕ್ಕೂ ಆತನಿಗೆ ನೆರವಾಗಲಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುವ ಆಟಗಾರರಾದ ವೈಭವ್ ಸೂರ್ಯವಂಶಿಯಂಥವರು ಆಟದಲ್ಲಿ ನಿರಂತರತೆ ಕಾಯ್ದುಕೊಳ್ಳುವ ಅಗತ್ಯವಿದೆ ಎಂದೂ ಅವರು ಕಿವಿಮಾತು ಹೇಳಿದ್ದಾರೆ. "ವೈಭವ್ ಅವರ ಪ್ರತಿಭೆಯನ್ನು ನಾವು ನೋಡಿದ್ದೇವೆ. ಗುಜರಾತ್ ಟೈಟನ್ಸ್ ವಿರುದ್ಧದ ಅವರ ಶತಕ ಅದ್ಭುತ. ಆದರೆ ಎರಡನೇ ಸೀಸನ್ ಸದಾ ಕಠಿಣ. ವಿರೋಧಿ ತಂಡಗಳು ಅವರ ಆಟದ ಬಗ್ಗೆ ಅಧ್ಯಯನ ಮಾಡಿರುತ್ತವೆ. ಸಾಧನೆಯನ್ನು ಉಳಿಸಿಕೊಂಡು ಹೋಗುವುದು ಸವಾಲಿನದ್ದು. ನಿರಂತರತೆಯನ್ನು ಕಾಪಾಡಿಕೊಳ್ಳುವಲ್ಲಿ ಅವರಿಗೆ ಸಂಗಕ್ಕಾರ ಅವರ ಮಾರ್ಗದರ್ಶನ ಮಹತ್ವದ್ದು" ಎಂದು ಹೇಳಿದ್ದಾರೆ.







