ಡಗೌಟ್ ನಲ್ಲಿ ಮೊಬೈಲ್ ಬಳಸಿದ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್; IPL ನಿಯಮಾವಳಿಗಳ ಉಲ್ಲಂಘನೆ ಎಂದ ಲಲಿತ್ ಮೋದಿ

Photo Credit : X\ indiatoday.in
ಗುವಾಹಟಿ: ಶುಕ್ರವಾರ ರಾತ್ರಿ ನಡೆದ ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಆಟಗಾರರ ಡಗೌಟ್ ನಲ್ಲಿ ಮೊಬೈಲ್ ಬಳಸುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ಬಳಿಕ, ವಿವಾದ ಭುಗಿಲೆದ್ದಿದೆ.
ರೋಮಿ ಭಿಂದರ್ ಮೊಬೈಲ್ ನಲ್ಲಿ ಏನನ್ನೋ ಟೈಪ್ ಮಾಡುತ್ತಿರುವುದು, ಅವರ ಪಕ್ಕ ವೈಭವ್ ಸೂರ್ಯವಂಶಿ ನಿಂತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರಾಯಲ್ ಚಾಲೆಂಜರ್ಸ್ ತಂಡ ನೀಡಿದ್ದ 202 ರನ್ ಗಳ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡ ಬೆನ್ನತ್ತಿದ್ದಾಗ, ವೈಭವ್ ಸೂರ್ಯವಂಶಿ ಔಟಾಗಿ ಆಟಗಾರರ ಡಗೌಟ್ ಗೆ ಮರಳಿದ್ದಾಗ ಈ ಘಟನೆ ನಡೆದಿರುವಂತೆ ಕಂಡು ಬಂದಿದೆ.
ಈ ವಿಡಿಯೊಗೆ ಆಕ್ಷೇಪ ವ್ಯಕ್ತಪಡಿಸಿರುವ ಐಪಿಎಲ್ ನ ಮಾಜಿ ಮುಖ್ಯಸ್ಥ ಲಲಿತ್ ಮೋದಿ, ಇದು ಐಪಿಎಲ್ ನಿಯಮಾವಳಿಗಳಿಗೆ ವಿರುದ್ಧವಾಗಿದ್ದು, ಅಧಿಕಾರಿಗಳು ತಂಡದ ಡಗೌಟ್ ನಲ್ಲಿ ಮೊಬೈಲ್ ಬಳಕೆಗೆ ಹೇಗೆ ಅವಕಾಶ ನೀಡಿದರು ಎಂದು ಸೋಜಿಗವಾಗುತ್ತಿದೆ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಇದರ ಬೆನ್ನಿಗೇ, ಕ್ರಿಕೆಟ್ ಪ್ರೇಮಿಗಳು ಹಾಗೂ ಪಂಡಿತರು ಇದು ಯಾವುದೇ ಹಾನಿಯಿಲ್ಲದ ಸಾಮಾನ್ಯ ಪರಿಶೀಲನೆಯೇ ಅಥವಾ ಐಪಿಎಲ್ ನಿಯಮಾವಳಿಗಳ ಗಂಭೀರ ಉಲ್ಲಂಘನೆಯೇ ಎಂಬ ಚರ್ಚೆಯಲ್ಲಿ ತೊಡಗಿದ್ದಾರೆ. ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳ ಪ್ರದೇಶಗಳಲ್ಲಿ ಬಿಸಿಸಿಐ ವಿಧಿಸಿರುವ ಕನಿಷ್ಠ ಮಾನದಂಡಗಳ ಪ್ರಕಾರ, ಐಪಿಎಲ್ ಋತುವಿನ ಎಲ್ಲ ಫ್ಯಾಂಚೈಸಿಗಳಿಗೂ ಕಟ್ಟುನಿಟ್ಟಿನ ಮೊಬೈಲ್ ನಿಷೇಧ ಹೇರಲಾಗಿದೆ. ಪಂದ್ಯದ ಮೇಲೆ ಯಾವುದೇ ಪ್ರಭಾವವನ್ನು ಬೀರಲು ಅವಕಾಶ ನೀಡದಿರುವ ಉದ್ದೇಶದಿಂದ ಬಾಹ್ಯ ಸಂವಹನಕ್ಕೆ ಅವಕಾಶ ನೀಡದಿರುವ ಮೊಬೈಲ್ ನಿಷೇಧ ನೀತಿಯನ್ನು ರೂಪಿಸಲಾಗಿದೆ.
ನಿಯಮಾವಳಿಗಳ ಪ್ರಕಾರ, ಡಗೌಟ್ ಗಳನ್ನು ವಿಶೇಷವಾಗಿ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶಗಳ ಭಾಗವನ್ನಾಗಿ ವ್ಯಾಖ್ಯಾನಿಸಲಾಗಿದೆ. ಈ ನಿಯಮಗಳು ಕೆಲವು ಸಿಬ್ಬಂದಿಗಳಿಗೆ ಕೊಂಚ ರಿಯಾಯಿತಿ ನೀಡಿದ್ದರೂ, ನಿರ್ಬಂಧಗಳು ಮಾತ್ರ ತೀಕ್ಷ್ಣವಾಗಿವೆ.
“ತಂಡದ ಕೆಲವು ಸದಸ್ಯರನ್ನು ಹೊರತುಪಡಿಸಿ, ಉಳಿದವರ್ಯಾರೂ ತಂಡದ ಡಗೌಟ್ ನಲ್ಲಿ ಮೊಬೈಲ್ ಫೋನ್ ಗಳು ಹಾಗೂ ಇನ್ನಿತರ ವಿದ್ಯುನ್ಮಾನ ಸಂವಹನ ಸಾಧನಗಳನ್ನು ಬಳಸಲು ಅವಕಾಶವಿಲ್ಲ. ತಂಡದ ಮ್ಯಾನೇಜರ್ ಡ್ರೆಸ್ಸಿಂಗ್ ರೂಂನಲ್ಲಿ ಮೊಬೈಲ್ ಫೋನ್ ಬಳಸಬಹುದೇ ಹೊರತು, ಡಗೌಟ್ ನಲ್ಲಲ್ಲ” ಎಂದು ಐಪಿಎಲ್ 2026ರ ಆಟಗಾರರು ಮತ್ತು ತಂಡದ ಅಧಿಕಾರಿಗಳ ಪ್ರದೇಶಗಳ ಶಿಷ್ಟಾಚಾರದಲ್ಲಿ ನಮೂದಿಸಲಾಗಿದೆ.
ಆದರೆ, ಈ ವಿವಾದದ ಸ್ವರೂಪವು ಸ್ಥಳದ ತಾಂತ್ರಿಕತೆಯನ್ನು ಅವಲಂಬಿಸಿದೆ. ಒಂದು ವೇಳೆ ರೋಮಿಯೇನಾದರೂ ಡ್ರೆಸ್ಸಿಂಗ್ ರೂಂ ಗೋಡೆಗಳ ನಡುವೆ ಮೊಬೈಲ್ ಬಳಸುತ್ತಿದ್ದರೆ, ಅವರು ತಮ್ಮ ತಂಡದ ಸಾಮಗ್ರಿಗಳೊಂದಿಗೆ ಸಂವಹನ ನಡೆಸುವ ಅಧಿಕಾರ ವ್ಯಾಪ್ತಿಯೊಳಗೇ ಇರಲಿದ್ದಾರೆ. ಆದರೆ, ಒಂದು ವೇಳೆ ಅವರೇನಾದರೂ ಆ ಸಾಧನವನ್ನು ಡಗೌಟ್ ಗೆ ತಂದಿದ್ದರೆ, ಆಟಗಾರರು ಮತ್ತು ತಂಡದ ಅಧಿಕಾರಿಗಳ ಪ್ರದೇಶಗಳ ಶಿಷ್ಟಾಚಾರದನ್ವಯ ಅವರು ನಿಷೇಧಿತ ವಲಯಕ್ಕೆ ನೇರವಾಗಿ ಪ್ರವೇಶಿಸಿದಂತಾಗಲಿದೆ.
ಒಂದು ವೇಳೆ ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶಗಳ ಮಾನದಂಡವನ್ನು ರಾಜಸ್ಥಾನ್ ರಾಯಲ್ಸ್ ತಂಡದ ಮ್ಯಾನೇಜರ್ ಉಲ್ಲಂಘಿಸಿರುವುದು ಕಂಡು ಬಂದರೆ, ಅವರು ಭಾರಿ ದಂಡದಿಂದ ಹಿಡಿದು ಆಟಗಾರರು ಮತ್ತು ಪಂದ್ಯದ ಅಧಿಕಾರಿಗಳ ಪ್ರದೇಶಗಳಿಂದ ತಾತ್ಕಾಲಿಕ ಅಮಾನತಿನಂತಹ ವಿವಿಧ ದಿಗ್ಬಂಧನಗಳಿಗೆ ಗುರಿಯಾಗುವ ಸಾಧ್ಯತೆ ಇದೆ.






