ರಣಜಿ | ಗೋವಾ ವಿರುದ್ಧ ಕರ್ನಾಟಕ ಬಿಗಿ ಹಿಡಿತ

Photo Credit : PTI
ಶಿವಮೊಗ್ಗ, ಅ.27:ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ ಆತಿಥೇಯ ಕರ್ನಾಟಕ ಕ್ರಿಕೆಟ್ ತಂಡ ಗೋವಾ ವಿರುದ್ಧ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಬಿಗಿ ಹಿಡಿತ ಸಾಧಿಸಿದೆ.
ಮಂದ ಬೆಳಕಿನ ಕಾರಣ ಮೂರನೇ ದಿನದಾಟ ಬೇಗನೆ ಕೊನೆಗೊಂಡಿದ್ದು, ಗೋವಾ ತಂಡ ಮೂರನೇ ದಿನದಾಟದಂತ್ಯಕ್ಕೆ 77 ಓವರ್ ಗಳಲ್ಲಿ 6 ವಿಕೆಟ್ ಗಳ ನಷ್ಟಕ್ಕೆ 171 ರನ್ ಕಲೆ ಹಾಕಿದೆ. ಇನ್ನೂ 200 ರನ್ ಹಿನ್ನಡೆಯಲ್ಲಿದೆ.
ನವುಲೆಯ ಕೆಎಸ್ಸಿಎ ಮೈದಾನದಲ್ಲಿ ಕರ್ನಾಟಕ ತಂಡದ ಮೊದಲ ಇನಿಂಗ್ಸ್ 371 ರನ್ಗೆ ಉತ್ತರಿಸ ಹೊರಟಿರುವ ಗೋವಾ ತಂಡಕ್ಕೆ ವೇಗಿಗಳಾದ ಅಭಿಲಾಷ್ ಶೆಟ್ಟಿ(3-63) ಹಾಗೂ ವಿದ್ವತ್ ಕಾವೇರಪ್ಪ (2-30)ಅವರು ಬಿಗುವಿನ ಬೌಲಿಂಗ್ ದಾಳಿಯಿಂದ ಆರಂಭಿಕ ಆಘಾತ ನೀಡಿದರು.
ಮೂರನೇ ದಿನವಾದ ಸೋಮವಾರ ಆರಂಭದಲ್ಲೇ ಗೋವಾ ತಂಡದ ಬ್ಯಾಟರ್ ಗಳನ್ನು ಅಭಿಲಾಷ್ ಶೆಟ್ಟಿ, ವಿದ್ವತ್ ಕಾವೇರಪ್ಪ ಕಾಡಿದರು. ಈ ಇಬ್ಬರು ಬೌಲರ್ ಗಳ ಬಿಗುವಿನ ದಾಳಿಯಿಂದಾಗಿ ಗೋವಾದ ಬ್ಯಾಟರ್ ಗಳು ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲು ಪರದಾಡಿದರು.
►ಆರಂಭಿಕ ಆಘಾತ ನೀಡಿದ ವೇಗಿಗಳು:
ರವಿವಾರ ಮೊದಲ ಇನಿಂಗ್ಸ್ ಆರಂಭಿಸಿದ ಗೋವಾ ತಂಡದ ಬ್ಯಾಟರ್ ಮಂಥನ್ ಕೌತುಕರ್ (11 ರನ್ )ಕೇವಲ 3.5 ಓವರ್ ನಲ್ಲಿ ತಮ್ಮ ವಿಕೆಟ್ ಒಪ್ಪಿಸಿ ಹೊರ ನಡೆದರು. ಬಳಿಕ ಸುಯಸ್ ಪ್ರಭುದೇಸಾಯಿ ಹಾಗೂ ಅಭಿನವ್ ತೇಜರಾಣ ಅವರು ತಾಳ್ಮೆಯ ಆಟವಾಗಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.
ಮೂರನೇ ದಿನವಾದ ಸೋಮವಾರ ಪಂದ್ಯ ಆರಂಭಗೊಂಡ ಎರಡನೇ ಓವರ್ ನಲ್ಲಿ (14.1) ಗೋವಾ ತಂಡವು ಸ್ಟಾರ್ ಬ್ಯಾಟರ್ ಸುಯಸ್ ಪ್ರಭುದೇಸಾಯಿ (12 ರನ್) ವಿಕೆಟ್ ಅನ್ನು ಕಳೆದುಕೊಂಡಿತು. ಅವರ ಹಿಂದೆಯೇ ಅಭಿನವ್ ತೇಜರಾಣ(18 ರನ್), ಸ್ನೇಹಲ್ ಕೌತನ್ಕರ್(10 ರನ್) ವಿಕೆಟ್ ಒಪ್ಪಿಸಿದರು. ಬಳಿಕ ಕ್ರೀಸ್ಗೆ ಬಂದ ದರ್ಶನ್ ಮಿಸಲ್(12 ರನ್) ಹಾಗೂ ಲಲಿತ್ ಯಾದವ್(36 ರನ್) ಜೊತೆಗೂಡಿ 5ನೇ ವಿಕೆಟ್ಗೆ 49 ರನ್ ಕಲೆ ಹಾಕಿ ತಂಡದ ಮೊತ್ತವನ್ನು 100ರ ಗಡಿ ಮುಟ್ಟಿಸಿದರು.
ಯಶೋವರ್ಧನ್(1-18) ಅವರು ದರ್ಶನ್ ಮಿಸಲ್ ವಿಕೆಟ್ ಪಡೆದುಕೊಳ್ಳುವ ಮೂಲಕ ಈ ಜೊತೆಯಾಟವನ್ನು ಮುರಿದರು. ಬಳಿಕ 53ನೇ ಓವರ್ ನಲ್ಲಿ ಲಲಿತ್ ಯಾದವ್ (36 ರನ್) ಅವರ ವಿಕೆಟ್ ಪಡೆದ ಅಭಿಲಾಷ್ ಶೆಟ್ಟಿ ಗೋವಾ ತಂಡಕ್ಕೆ ಶಾಕ್ ನೀಡಿದರು.
►ಪ್ರತಿರೋಧ ತೋರಿದ ಅರ್ಜುನ್ ತೆಂಡುಲ್ಕರ್:
ಮೂರನೇ ದಿನದ ಮೊದಲ ಅವಧಿಯಲ್ಲಿ ಗೋವಾ ಬ್ಯಾಟರ್ ಗಳು ಪೆವಲಿಯನ್ ಪರೇಡ್ ನಡೆಸಿದರೂ ಭಾರತ ಕ್ರಿಕೆಟ್ನ ದಿಗ್ಗಜ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ (ಔಟಾಗದೆ 43 ರನ್,115 ಎಸೆತ, 5 ಬೌಂಡರಿ, 1 ಸಿಕ್ಸರ್) ಕೆಲ ಹೊತ್ತು ಕರ್ನಾಟಕ ಬೌಲರ್ ಗಳನ್ನು ಕಾಡುವ ಮೂಲಕ ಪ್ರತಿರೋಧ ತೋರಿದರು.
ಒಂದು ಹಂತದಲ್ಲಿ 53 ಓವರ್ ಗಳಲ್ಲಿ 115 ರನ್ಗೆ ಪ್ರಮುಖ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಗೋವಾ ತಂಡಕ್ಕೆ ಮೋಹಿತ್ ರೆಡ್ಕರ್ (24 ರನ್) ಅವರ ಜೊತೆಗೂಡಿ 7ನೇ ವಿಕೆಟ್ಗೆ ಮುರಿಯದ ಜೊತೆಯಾಟದಲ್ಲಿ 43 ರನ್ ಸೇರಿಸಿ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಈ ಮೂಲಕ ಆರಂಭಿಕ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾದರು.
►ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್: 371 ರನ್
ಗೋವಾ ಮೊದಲ ಇನಿಂಗ್ಸ್: 171/6
(ಅರ್ಜುನ್ ತೆಂಡುಲ್ಕರ್ ಔಟಾಗದೆ 43, ಲಲಿತ್ ಯಾದವ್ 36, ಮೋಹಿತ್ ರೆಡ್ಕರ್ ಔಟಾಗದೆ 24, ಅಭಿಲಾಷ್ ಶೆಟ್ಟಿ 3-63, ವಿದ್ವತ್ ಕಾವೇರಪ್ಪ 2-30)







