ರಣಜಿ: ಚಂಡಿಗಡ ವಿರುದ್ಧ ಕರ್ನಾಟಕ 547/8 ಡಿಕ್ಲೇರ್

ರವಿಚಂದ್ರನ್ ಸ್ಮರಣ್ | Photo Credit : X
ಹುಬ್ಬಳ್ಳಿ, ನ.17: ಎಡಗೈ ಬ್ಯಾಟರ್ ರವಿಚಂದ್ರನ್ ಸ್ಮರಣ್ ದ್ವಿಶತಕ(ಔಟಾಗದೆ 227 ರನ್, 362 ಎಸೆತ, 16 ಬೌಂಡರಿ, 2 ಸಿಕ್ಸರ್), ಆಲ್ರೌಂಡರ್ ಗಳಾದ ಶ್ರೇಯಸ್ ಗೋಪಾಲ್(62 ರನ್, 147 ಎಸೆತ, 5 ಬೌಂಡರಿ)ಹಾಗೂ ಶಿಖರ್ ಶೆಟ್ಟಿ(59 ರನ್, 122 ಎಸೆತ, 7 ಬೌಂಡರಿ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಚಂಡಿಗಡ ತಂಡದ ವಿರುದ್ಧ 8 ವಿಕೆಟ್ ಗಳ ನಷ್ಟಕ್ಕೆ 547 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಚಂಡಿಗಡ ತಂಡ ಸೋಮವಾರ ಎರಡನೇ ದಿನದಾಟದಂತ್ಯಕ್ಕೆ 72 ರನ್ ಗೆ ನಾಲ್ಕು ವಿಕೆಟ್ ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿದೆ.
ಸ್ಪಿನ್ನರ್ ಶ್ರೇಯಸ್ ಗೋಪಾಲ್(3-18) ಮೂರು ವಿಕೆಟ್ ಗಳನ್ನು ಕಬಳಿಸಿ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ.
ನಾಯಕ ಮನನ್ ವೋರಾ(ಔಟಾಗದೆ 14)ಕ್ರೀಸ್ ಕಾಯ್ದುಕೊಂಡಿದ್ದಾರೆ. ಆರಂಭಿಕ ಬ್ಯಾಟರ್ ಅರ್ಜುನ್ ಆಝಾದ್(32 ರನ್)ಒಂದಷ್ಟು ಹೋರಾಟ ನೀಡಿದ್ದಾರೆ. ಸದ್ಯ ಚಂಡಿಗಡ ಇನ್ನೂ 475 ರನ್ ಹಿನ್ನಡೆಯಲ್ಲಿದ್ದು, ಫಾಲೋ-ಆನ್ ಭೀತಿಯಲ್ಲಿದೆ.
*ಕರ್ನಾಟಕ 547/8 ಡಿಕ್ಲೇರ್: ಇದಕ್ಕೂ ಮೊದಲು ಕರ್ನಾಟಕ ತಂಡ 5 ವಿಕೆಟ್ ಗಳ ನಷ್ಟಕ್ಕೆ 298 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. 110 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ ಸ್ಮರಣ್ 344 ಎಸೆತಗಳಲ್ಲಿ 16 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಾಯದಿಂದ 200 ರನ್ ಪೂರೈಸಿದರು. ಈ ವರ್ಷದ ರಣಜಿಯಲ್ಲಿ 2ನೇ ಬಾರಿ ದ್ವಿಶತಕ ದಾಖಲಿಸಿದರು. ನಾಲ್ಕು ಇನಿಂಗ್ಸ್ನಲ್ಲಿ 2ನೇ ದ್ವಿಶತಕ ದಾಖಲಿಸಿ ಮಿಂಚಿದರು. ತನ್ನ ವೃತ್ತಿಜೀವನದಲ್ಲಿ ಮೂರನೇ ದ್ವಿಶತಕ ಗಳಿಸಿದ್ದಾರೆ.
ಕರ್ನಾಟಕ ತಂಡವು 13 ರನ್ ಗೆ 2 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಕ್ರೀಸಿಗಿಳಿದ 22ರ ಹರೆಯದ ಸ್ಮರಣ್ ಅವರು ಒತ್ತಡದಲ್ಲೂ ಹೋರಾಟಕಾರಿ ಪ್ರದರ್ಶನ ನೀಡಿದರು. ಕರ್ನಾಟಕ ತಂಡವು ಬೃಹತ್ ಮೊತ್ತ ಕಲೆ ಹಾಕುವಲ್ಲಿ ಮಹತ್ವದ ಕೊಡುಗೆ ನೀಡಿದರು.
ಕರುಣ್ ನಾಯರ್ ಜೊತೆ ನಾಲ್ಕನೇ ವಿಕೆಟ್ ಗೆ 119 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟ ಸ್ಮರಣ್ ಅವರು ಕೆಳ ಕ್ರಮಾಂಕದ ಆಟಗಾರರಾದ ಶ್ರೇಯಸ್ ಗೋಪಾಲ್ ಹಾಗೂ ಶಿಖರ್ ಶೆಟ್ಟಿ ಜೊತೆ ಸೇರಿಕೊಂಡು ಇನಿಂಗ್ಸ್ ಬೆಳೆಸಿದರು.
ಶ್ರೇಯಸ್ ಜೊತೆ ಆರನೇ ವಿಕೆಟ್ ಗೆ 141 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದ ಸ್ಮರಣ್ ಅವರು ವಿದ್ಯಾಧರ ಪಾಟೀಲ್(30 ರನ್) ಹಾಗೂ ಶಿಖರ್ ಶೆಟ್ಟಿ ಅವರೊಂದಿಗೆ ಕ್ರಮವಾಗಿ 76 ರನ್ ಹಾಗೂ 120 ರನ್ ಜೊತೆಯಾಟ ನಡೆಸಿ ಕರ್ನಾಟಕವು 8 ವಿಕೆಟ್ ಗೆ 547 ರನ್ ಗಳಿಸುವಲ್ಲಿ ನೆರವಾದರು.
ಚಂಡಿಗಡದ ಪರ ಜಗಜಿತ್ ಸಿಂಗ್ (2-70), ವಿಶು ಕಶ್ಯಪ್ 2-141)ಹಾಗೂ ನಿಶುಂಕ್ ಬಿರ್ಲಾ(2-159)ತಲಾ ಎರಡು ವಿಕೆಟ್ ಗಳನ್ನು ಪಡೆದರು.







