ರಣಜಿ |ಚಂಡಿಗಡ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಜಯ

Photo Credit : PTI
ಹುಬ್ಬಳ್ಳಿ, ನ. 18: ಸ್ಪಿನ್ನರ್ ಗಳಾದ ಶ್ರೇಯಸ್ ಗೋಪಾಲ್ ಮತ್ತು ಶಿಖರ್ ಶೆಟ್ಟಿ ಅವರ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ರಣಜಿ ಟ್ರೋಫಿ ಎಲಿಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಮಂಗಳವಾರ ಕರ್ನಾಟಕವು ಚಂಡಿಗಡ ತಂಡವನ್ನು ಇನಿಂಗ್ಸ್ ಮತ್ತು 185 ರನ್ ಗಳ ಬೃಹತ್ ಅಂತರದಿಂದ ಸೋಲಿಸಿದೆ.
ಹುಬ್ಬಳ್ಳಿಯ ಕೆಎಸ್ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ನಾಲ್ಕು ದಿನಗಳ ಪಂದ್ಯದ ಫಲಿತಾಂಶವು ಕೇವಲ ಮೂರೇ ದಿನಗಳಲ್ಲಿ ಬಂದಿದೆ.
ಪಂದ್ಯದಲ್ಲಿ ಶ್ರೇಯಸ್ ಗೋಪಾಲ್ 10 ವಿಕೆಟ್ ಗಳನ್ನು ಪಡೆದರೆ, ಶಿಖರ್ ಶೆಟ್ಟಿ ಏಳು ವಿಕೆಟ್ ಗಳನ್ನು ಉರುಳಿಸಿದರು.
ಕರ್ನಾಟಕದ ಮೊದಲ ಇನಿಂಗ್ಸ್ನಲ್ಲಿ ದ್ವಿಶತಕ ಬಾರಿಸಿದ ರವಿಚಂದ್ರನ್ ಸ್ಮರಣ್ ರನ್ನು ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕರಿಸಲಾಯಿತು.
ಕರ್ನಾಟಕದ ಬೃಹತ್ ಮೊದಲ ಇನಿಂಗ್ಸ್ ಮೊತ್ತ 547/8 ಡಿಕ್ಲೇರ್ ಗೆ ಉತ್ತರಿಸುತ್ತಾ ಚಂಡಿಗಡವು ಎರಡನೇ ದಿನವಾದ ಸೋಮವಾರ ತನ್ನ ಮೊದಲ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಗಳ ನಷ್ಟಕ್ಕೆ 72 ರನ್ ಗಳನ್ನು ಗಳಿಸಿತ್ತು.
ಮಂಗಳವಾರ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಚಂಡಿಗಡ, 222 ರನ್ ಗಳಿಗೆ ಇನಿಂಗ್ಸ್ ಮುಕ್ತಾಯಗೊಳಿಸಿತು. ನಾಯಕ ಮನನ್ ವೊಹ್ರಾ 106 ರನ್ ಗಳನ್ನು ಗಳಿಸಿ ಅಜೇಯವಾಗಿ ಉಳಿದರು.
ಲೆಗ್ ಸ್ಪಿನ್ನರ್ ಶ್ರೇಯಸ್ ಕೇವಲ 73 ರನ್ ಗಳನ್ನು ಕೊಟ್ಟು ಏಳು ವಿಕೆಟ್ ಗಳನ್ನು ಉರುಳಿಸಿ ಎದುರಾಳಿ ತಂಡದ ಪತನದ ಪ್ರಮುಖ ರೂವಾರಿಯಾದರು. ಶಿಖರ್ ಶೆಟ್ಟಿ ಎರಡು ವಿಕೆಟ್ ಗಳನ್ನು ಉರುಳಿಸಿ ಶ್ರೇಯಸ್ ಗೆ ಉತ್ತಮ ಬೆಂಬಲ ನೀಡಿದರು.
ಇದರೊಂದಿಗೆ ಕರ್ನಾಟಕವು 325 ರನ್ ಗಳ ಬೃಹತ್ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತು.
ಕರ್ನಾಟಕವು ಫಾಲೋ-ಆನ್ ಹೇರಿದ ಬಳಿಕ, ಚಂಡಿಗಡವು ತನ್ನ ಎರಡನೇ ಇನಿಂಗ್ಸ್ ಆರಂಭಿಸಿತು. ಬೃಹತ್ ಮೊದಲ ಇನಿಂಗ್ಸ್ ಹಿನ್ನಡೆಯ ಹಿನ್ನೆಲೆಯಲ್ಲಿ, ಇನಿಂಗ್ಸ್ ಸೋಲನ್ನು ತಪ್ಪಿಸಲು ಒಟ್ಟು ಐದು ಅವಧಿಗಳಲ್ಲಿ ಬ್ಯಾಟಿಂಗ್ ಮಾಡುವ ಬೃಹತ್ ಸವಾಲನ್ನು ಚಂಡಿಗಡವು ಎದುರಿಸಿತು.
ಆದರೆ ಪ್ರವಾಸಿಗರು ಎರಡನೇ ಇನಿಂಗ್ಸ್ನಲ್ಲೂ ತೀವ್ರ ಬ್ಯಾಟಿಂಗ್ ಕುಸಿತ ಕಂಡರು. ಚಂಡಿಗಡವು ತನ್ನ ಎರಡನೇ ಇನಿಂಗ್ಸನ್ನು 140 ರನ್ ಗಳಿಗೆ ಮುಕ್ತಾಯಗೊಳಿಸಿತು.
ಐದು ವಿಕೆಟ್ ಗಳನ್ನು ಉರುಳಿಸಿದ ಶಿಖರ್ ಶೆಟ್ಟಿ ಚಂಡಿಗಡ ಬ್ಯಾಟಿಂಗ್ ಸರದಿಯ ನಡು ಮುರಿದರು. ಶ್ರೇಯಸ್ ಮೂರು ವಿಕೆಟ್ ಗಳನ್ನು ಉರುಳಿಸುವ ಮೂಲಕ ಅವರಿಗೆ ಉತ್ತಮ ಬೆಂಬಲ ನೀಡಿದರು.
ಶಿಖರ್ ತನ್ನ ಎರಡನೇ ಅವಧಿಯ ಬೌಲಿಂಗ್ ನಲ್ಲಿ, ತನ್ನ ಕಡೆಯಿಂದ ನಿರಂತರವಾಗಿ 11.5 ಓವರ್ ಗಳನ್ನು ಎಸೆದು 47 ರನ್ ಗಳನ್ನು ನೀಡಿ ಐದು ವಿಕೆಟ್ ಗಳನ್ನು ಉರುಳಿಸಿದರು. ಮೊದಲ ಅವಧಿಯ ಬೌಲಿಂಗ್ ನಲ್ಲಿ ಅವರು ಒಂದು ಓವರ್ ಹಾಕಿ 14 ರನ್ ಗಳನ್ನು ಕೊಟ್ಟಿದ್ದರು.
ಈ ಪಂದ್ಯದಲ್ಲಿ, ಶ್ರೇಯಸ್ ಒಟ್ಟು 118 ರನ್ ಗಳನ್ನು ಕೊಟ್ಟು 10 ವಿಕೆಟ್ ಗಳನ್ನು ಪಡೆದರು.
ಕರ್ನಾಟಕವು ಈ ಪಂದ್ಯದಿಂದ ಒಟ್ಟು ಏಳು ಅಂಕಗಳನ್ನು ಪಡೆದುಕೊಂಡಿದೆ. ಇದರಲ್ಲಿ ಇನಿಂಗ್ಸ್ ವಿಜಯಕ್ಕಾಗಿ ನೀಡಲಾದ ಒಂದು ಬೋನಸ್ ಅಂಕವೂ ಸೇರಿದೆ. ಇದರೊಂದಿಗೆ ಅದು ಐದು ಪಂದ್ಯಗಳಿಂದ 21 ಅಂಕಗಳನ್ನು ಪಡೆದು ‘ಬಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.







