ರಣಜಿಯಲ್ಲಿ ಸತತ ನಾಲ್ಕು ಶತಕ: ತೆಂಡುಲ್ಕರ್, ಅಝರುದ್ದೀನ್ ಅವರಿದ್ದ ಪಟ್ಟಿಗೆ ಸೇರಿದ ಸಿದ್ದೇಶ್ ಲಾಡ್

ಸಿದ್ದೇಶ್ ಲಾಡ್ | Photo Credit : X
ಹೊಸದಿಲ್ಲಿ: ಶ್ರೇಷ್ಠ ಫಾರ್ಮ್ನಲ್ಲಿರುವ ಮುಂಬೈ ಕ್ರಿಕೆಟ್ ತಂಡದ ನಾಯಕ ಸಿದ್ದೇಶ್ ಲಾಡ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದೀಗ ಸತತ ನಾಲ್ಕನೇ ಶತಕ ಸಿಡಿಸಿದರು. ದಿಲ್ಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದರು.
ಲಾಡ್ ಇತ್ತೀಚೆಗೆ 127, 170, 104 ಹಾಗೂ ಇದೀಗ 103 ರನ್ ಗಳಿಸಿದ್ದು, ಈ ಸಾಧನೆಯ ಮೂಲಕ ಭಾರತೀಯ ಕ್ರಿಕೆಟಿನ ಖ್ಯಾತ ಲೆಜೆಂಡ್ಗಳಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ತಿಂಗಳು ಲಾಡ್ ಅವರು ಹೈದರಾಬಾದ್ ವಿರುದ್ದ 104 ರನ್ ಗಳಿಸಿದ್ದು, ಆ ಪಂದ್ಯವನ್ನು ಮುಂಬೈ 9 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಹಿಮಾಚಲ ಪ್ರದೇಶ ವಿರುದ್ಧ 127 ಹಾಗೂ ಪುದುಚೇರಿ ತಂಡದ ವಿರುದ್ಧ 170 ರನ್ ಗಳಿಸಿದ್ದು ಈ ಎರಡು ಪಂದ್ಯಗಳಲ್ಲಿ ಮುಂಬೈ ತಂಡವು ಜಯ ಸಾಧಿಸಿತ್ತು.
ಸತತ ನಾಲ್ಕು ಶತಕಗಳ ಮೂಲಕ ಲಾಡ್ ಅವರು ಭಾರತೀಯ ದಿಗ್ಗಜರಾದ ವಿಜಯ್ ಮರ್ಚೆಂಟ್, ಮುಹಮ್ಮದ್ ಅಝರುದ್ದೀನ್ ಹಾಗೂ ಸಚಿನ್ ತೆಂಡುಲ್ಕರ್ ಸಾಲಿಗೆ ಸೇರಿದರು. ಪಾರ್ಥಿವ್ ಪಟೇಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸತತ ಐದು ಶತಕಗಳನ್ನು ಗಳಿಸಿರುವ ಭಾರತೀಯ ದಾಖಲೆ ಹೊಂದಿದ್ದಾರೆ. ಸತತ ಆರು ಶತಕಗಳನ್ನು ಗಳಿಸಿದ ವಿಶ್ವ ದಾಖಲೆಯು ಸಿಬಿ ಫ್ರೈ ,ಡಾನ್ ಬ್ರಾಡ್ಮನ್ ಹಾಗೂ ಮೈಕ್ ಪ್ರೋಕ್ಟರ್ ಹೆಸರಲ್ಲಿದೆ. ಲಾಡ್ ಇದೇ ರೀತಿಯ ಫಾರ್ಮ್ ಮುಂದುವರಿಸಿದರೆ, ಈ ದಾಖಲೆಯನ್ನು ಸರಿಗಟ್ಟುವ ಅವಕಾಶವಿದೆ.





