ರಣಜಿ: ಮಹಾರಾಷ್ಟ್ರ ವಿರುದ್ಧ ಡ್ರಾ ಸಾಧಿಸಿದ ಕರ್ನಾಟಕ

ಪುಣೆ, ನ.11: ಮಯಾಂಕ್ ಅಗರ್ವಾಲ್ ಹಾಗೂ ಅಭಿನವ್ ಮನೋಹರ್ ಅವರ ಎಚ್ಚರಿಕೆಯ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡವು ಆತಿಥೇಯ ಮಹಾರಾಷ್ಟ್ರ ತಂಡದ ವಿರುದ್ಧದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯವನ್ನು ಡ್ರಾನಲ್ಲಿ ಕೊನೆಗೊಳಿಸಿದೆ.
ಎಂಸಿಎ ಸ್ಟೇಡಿಯಂನಲ್ಲಿ 4ನೇ ದಿನವಾದ ಮಂಗಳವಾರ 5 ವಿಕೆಟ್ ಗಳ ನಷ್ಟಕ್ಕೆ 144 ರನ್ನಿಂದ ತನ್ನ 2ನೇ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ ತಂಡವು ಅಪಾಯಕ್ಕೆ ಕೈ ಹಾಕದೆ ಸುರಕ್ಷಿತ ಆಟಕ್ಕೆ ಮೊರೆ ಹೋಗಿದ್ದು 8 ವಿಕೆಟ್ ಗಳ ನಷ್ಟಕ್ಕೆ 310 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತು.
ನಾಯಕ ಮಯಾಂಕ್(103 ರನ್, 249 ಎಸೆತ, 8 ಬೌಂಡರಿ, 1 ಸಿಕ್ಸರ್)ಹಾಗೂ ಅಭಿನವ್ ಮನೋಹರ್(96 ರನ್, 160 ಎಸೆತ, 11 ಬೌಂಡರಿ, 2 ಸಿಕ್ಸರ್)6ನೇ ವಿಕೆಟ್ಗೆ 92 ರನ್ ಜೊತೆಯಾಟದಲ್ಲಿ ಭಾಗಿಯಾದರು. ಟೀ ವಿರಾಮದ ವೇಳೆಗೆ ಉಭಯ ತಂಡಗಳು ಪಂದ್ಯ ಡ್ರಾಗೊಳಿಸಲು ನಿರ್ಧರಿಸಿದಾಗ ಕರ್ನಾಟಕ ತಂಡ 8 ವಿಕೆಟ್ ಗಳ ನಷ್ಟಕ್ಕೆ 302 ರನ್ ಗಳಿಸಿತ್ತು.
ಮೊದಲ ಇನಿಂಗ್ಸ್ ನಲ್ಲಿ 13 ರನ್ ಮುನ್ನಡೆ ಪಡೆದಿದ್ದ ಕರ್ನಾಟಕ ತಂಡವು ಮೂರಂಕವನ್ನು ಗಳಿಸಿದರೆ, ಮಹಾರಾಷ್ಟ್ರ ಒಂದಂಕಿಗೆ ತೃಪ್ತಿಪಟ್ಟಿತು. ಎಲೈಟ್ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 4 ಪಂದ್ಯಗಳಲ್ಲಿ ಒಟ್ಟು 14 ಅಂಕ ಗಳಿಸಿರುವ ಕರ್ನಾಟಕ ತಂಡವು ಅಗ್ರ ಸ್ಥಾನದಲ್ಲಿದೆ. ಮಹಾರಾಷ್ಟ್ರ ತಂಡ(4 ಪಂದ್ಯ, 11 ಅಂಕ)ಮೂರನೇ ಸ್ಥಾನದಲ್ಲಿದೆ.
5 ವಿಕೆಟ್ ನಷ್ಟಕ್ಕೆ 144 ರನ್ನಿಂದ ಮಂಗಳವಾರ ಬ್ಯಾಟಿಂಗ್ ಆರಂಭಿಸಿದ ಕರ್ನಾಟಕದ ವಿರುದ್ಧ ಮಹಾರಾಷ್ಟ್ರವು ಫಲಿತಾಂಶ ದಾಖಲಿಸುವ ಹುಮ್ಮಸ್ಸಿನಲ್ಲಿತ್ತು. ಆದರೆ ಅಗರ್ವಾಲ್ ಹಾಗೂ ಮನೋಹರ್ ತಾಳ್ಮೆಯ ಇನಿಂಗ್ಸ್ ಆಡಿ ಎದುರಾಳಿಗಳ ಲೆಕ್ಕಾಚಾರ ತಲೆಕೆಳಗಾಗಿಸಿದರು.
ಆಫ್ ಸ್ಪಿನ್ನರ್ ಸಿದ್ದೇಶ್ ವೀರ್ ಗೆ ವಿಕೆಟ್ ಒಪ್ಪಿಸುವ ಮೊದಲು ಮಯಾಂಕ್ ತನ್ನ 19ನೇ ಪ್ರಥಮ ದರ್ಜೆ ಶತಕ ದಾಖಲಿಸಿ ಮಹಾರಾಷ್ಟ್ರದ ಗೆಲುವಿನ ವಿಶ್ವಾಸಕ್ಕೆ ಕೊಳ್ಳಿ ಇಟ್ಟರು. ಮಯಾಂಕ್ಗೆ ಉತ್ತಮ ಸಾಥ್ ನೀಡಿದ ಮನೋಹರ್ 96 ರನ್ ಗೆ ವಿಕ್ಕಿ ಒಸ್ಟ್ವಾಲ್ ಗೆ ವಿಕೆಟ್ ಒಪ್ಪಿಸಿ 4 ರನ್ನಿಂದ ಶತಕ ವಂಚಿತರಾದರು.
3ನೇ ದಿನದಾಟದಲ್ಲಿ 70 ರನ್ ಗೆ 3 ವಿಕೆಟ್ ಗಳನ್ನು ಪಡೆದಿದ್ದ ಮುಕೇಶ ಚೌಧರಿ 4ನೇ ದಿನದಾಟದಲ್ಲಿ ಬೌಲಿಂಗ್ ಮಾಡಲಿಲ್ಲ.
ಮೊದಲ ಇನಿಂಗ್ಸ್ ನಲ್ಲಿ 70 ರನ್ ಗಳಿಸಿದ್ದಲ್ಲದೆ, 70 ರನ್ ಗೆ 4 ವಿಕೆಟ್ ಗಳನ್ನು ಉರುಳಿಸಿ ಆಲ್ರೌಂಡ್ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್ ‘ಪಂದ್ಯಶ್ರೇಷ್ಠ‘ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್: 313 ರನ್
ಮಹಾರಾಷ್ಟ್ರ ಮೊದಲ ಇನಿಂಗ್ಸ್: 300 ರನ್
ಕರ್ನಾಟಕ ಎರಡನೇ ಇನಿಂಗ್ಸ್: 310/8 ಡಿಕ್ಲೇರ್
(ಮಯಾಂಕ್ ಅಗರ್ವಾಲ್ 103, ಅಭಿನವ ಮನೋಹರ್ 96, ಮುಕೇಶ ಚೌಧರಿ 3-70, ವಿಕಿ ಒಸ್ಟ್ವಾಲ್ 2-50)
ಪಂದ್ಯಶ್ರೇಷ್ಠ: ಶ್ರೇಯಸ್ ಗೋಪಾಲ್.







