ರಣಜಿ| ಕೇರಳ ವಿರುದ್ಧ ಕರ್ನಾಟಕ ತಂಡಕ್ಕೆ ಭರ್ಜರಿ ಜಯ
ತಿರುವನಂತಪುರ, ನ.4: ಆತಿಥೇಯ ಕೇರಳ ಕ್ರಿಕೆಟ್ ತಂಡವನ್ನು ಇನಿಂಗ್ಸ್ ಹಾಗೂ 164 ರನ್‌ಗಳ ಅಂತರದಿಂದ ಮಣಿಸಿರುವ ಕರ್ನಾಟಕ ತಂಡವು ಈ ವರ್ಷ ರಣಜಿ ಟ್ರೋಫಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದಿದೆ. ಮೊದಲೆರಡು ಸುತ್ತಿನ ಪಂದ್ಯದಲ್ಲಿ ಕರ್ನಾಟಕ ತಂಡವು ಸೌರಾಷ್ಟ್ರ ಹಾಗೂ ಗೋವಾ ತಂಡಗಳ ವಿರುದ್ಧ ಡ್ರಾ ಸಾಧಿಸಿತ್ತು.
ರಣಜಿ ಟೂರ್ನಿಯ ‘ಬಿ’ ಗುಂಪಿನ 3ನೇ ಸುತ್ತಿನ ಪಂದ್ಯದ 4ನೇ ಹಾಗೂ ಕೊನೆಯ ದಿನವಾದ ಮಂಗಳವಾರ ಬಲಗೈ ಆಫ್-ಸ್ಪಿನ್ನರ್ ಮುಹ್ಸಿನ್ ಖಾನ್ ಚೊಚ್ಚಲ ಐದು ವಿಕೆಟ್ ಗೊಂಚಲು(6-29)ಕಬಳಿಸಿ ಕರ್ನಾಟಕದ ಭರ್ಜರಿ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ವೇಗದ ಬೌಲರ್ ವಿದ್ವತ್ ಕಾವೇರಪ್ಪ (2-28)ಬೆಳಗ್ಗಿನ ಅವಧಿಯಲ್ಲಿ ಹೊಸ ಚೆಂಡಿನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಿ ಕೇರಳ ತಂಡವನ್ನು ಕಾಡಿದರು.
ಬೌನ್ಸ್ ಆಗುತ್ತಿದ್ದ ಪಿಚ್‌ನಲ್ಲಿ ಮುಹ್ಸಿನ್ ಅವರ ನಿಖರ ಬೌಲಿಂಗ್‌ಗೆ ಕೇರಳದ ಬ್ಯಾಟರ್‌ಗಳು ನಿರುತ್ತರವಾದರು. ಬೆರಳು ನೋವಿನೊಂದಿಗೆ ಆಡಿದ ಕೊನೆಯ ಆಟಗಾರ ಏಡೆನ್ ಟಾಮ್(ಔಟಾಗದೆ 39 ರನ್, 68 ಎಸೆತಗಳು)ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಎಂ.ಯು. ಹರಿಕೃಷ್ಣನ್(6ರನ್, 94 ಎಸೆತಗಳು)10ನೇ ವಿಕೆಟ್ ಜೊತೆಯಾಟದಲ್ಲಿ ಸುಮಾರು 23 ಓವರ್‌ಗಳಲ್ಲಿ 44 ರನ್ ಸೇರಿಸಿ ಕರ್ನಾಟಕ ತಂಡದ ಗೆಲುವನ್ನು ವಿಳಂಬಗೊಳಿಸಿದರು.
ವಿದ್ವತ್ ಕಾವೇರಪ್ಪ ತನ್ನ ಮೊದಲ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಉರುಳಿಸಿ ತಂಡದ ಗೆಲುವಿಗೆ ನಾಂದಿ ಹಾಡಿದರು. ಬದಲಿ ಆರಂಭಿಕ ಆಟಗಾರ ಎಂ.ಡಿ. ನಿದೀಶ್(9 ರನ್)ಕರುಣ್ ನಾಯರ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಕ್ಷಯ್ ಚಂದ್ರನ್ ಶೂನ್ಯಕ್ಕೆ ಕ್ಲೀನ್‌ಬೌಲ್ಡಾದರು. ಆಗ ಕೇರಳ ತಂಡ 19 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡಿತು.
ಕೇರಳದ ನಾಯಕ ಮುಹಮ್ಮದ್ ಅಝರುದ್ದೀನ್(15 ರನ್)ಸಕಾರಾತ್ಮಕ ಆರಂಭ ಪಡೆದರು. ಆದರೆ, ಶಿಖರ್ ಶೆಟ್ಟಿ ಎಸೆತವನ್ನು ಎದುರಿಸುವ ಭರದಲ್ಲಿ ವಿಕೆಟ್‌ಕೀಪರ್ ಕೆ.ಶ್ರೀಜಿತ್‌ಗೆ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಟಗಾರ ಕೃಷ್ಣ ಪ್ರಸಾದ್ ಹಾಗೂ ಅಹ್ಮದ್ ಇಮ್ರಾನ್ 4ನೇ ವಿಕೆಟ್‌ಗೆ 57 ರನ್ ಜೊತೆಯಾಟ ನಡೆಸಿ ಒಂದಷ್ಟು ಪ್ರತಿರೋಧ ಒಡ್ಡಿದರು. ಮುಹ್ಸಿನ್ ಖಾನ್ ಅವರು ಪ್ರಸಾದ್(33ರನ್)ಹಾಗೂ ಇಮ್ರಾನ್(23 ರನ್)ವಿಕೆಟ್‌ಗಳನ್ನು ಬೆನ್ನುಬೆನ್ನಿಗೆ ಉರುಳಿಸಿ ಕೇರಳ ತಂಡವು 106 ರನ್‌ಗೆ 5ನೇ ವಿಕೆಟ್ ಕಳೆದುಕೊಳ್ಳುವಂತೆ ಮಾಡಿದರು.
ಬಿ.ಅಪರಾಜಿತ್(19 ರನ್) ಹಾಗೂ ಸಚಿನ್ ಬೇಬಿ ಸ್ಪಿನ್ನರ್‌ಗಳ ವಿರುದ್ಧ ಎಚ್ಚರಿಕೆಯಿಂದ ಆಡಿದರು. ಆದರೆ ಬೇಬಿ(12 ರನ್) ವಿಕೆಟನ್ನು ಪಡೆದ ಮುಹ್ಸಿನ್ ಈ ಇಬ್ಬರ ಜೊತೆಯಾಟವನ್ನು ಮುರಿದರು. ಮತ್ತೊಂದು ಕ್ಷಿಪ್ರ ಎಸೆತದ ಮೂಲಕ ಶಾನ್ ರೋಜರ್(0) ವಿಕೆಟನ್ನು ಮುಹ್ಸಿನ್ ಉರುಳಿಸಿದರು. ಆದರೆ ಬಾಲಂಗೋಚಿಗಳಾದ ಏಡೆನ್ ಟಾಮ್ ಹಾಗೂ ಹರಿಕೃಷ್ಣನ್ ಭೋಜನ ವಿರಾಮದ ಬಳಿಕವೂ ಬ್ಯಾಟಿಂಗ್ ಮುಂದುವರಿಸಿ ಕೇರಳದ ಸೋಲಿನ ಅಂತರವನ್ನು ಸ್ವಲ್ಪಮಟ್ಟಿಗೆ ಕಡಿಮೆಗೊಳಿಸಿದರು.
ಕರ್ನಾಟಕದ ಮೊದಲ ಇನಿಂಗ್ಸ್‌ನಲ್ಲಿ 233 ರನ್ ಗಳಿಸಿದ್ದ ಕರುಣ್ ನಾಯರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್: 586/5 ಡಿಕ್ಲೇರ್
ಕೇರಳ ಮೊದಲ ಇನಿಂಗ್ಸ್: 238 ರನ್‌ಗೆ ಆಲೌಟ್
ಕೇರಳ ಎರಡನೇ ಇನಿಂಗ್ಸ್: 79.3 ಓವರ್‌ಗಳಲ್ಲಿ 184 ರನ್‌ಗೆ ಆಲೌಟ್
(ಕೃಷ್ಣ ಪ್ರಸಾದ್ 33, ಏಡೆನ್ ಟಾಮ್ ಔಟಾಗದೆ 39, ಅಹ್ಮದ್ ಇಮ್ರಾನ್ 23, ಅಪರಾಜಿತ್ 19, ಮುಹ್ಸಿನ್ ಖಾನ್ 6-29, ವಿದ್ವತ್ ಕಾವೇರಪ್ಪ 2-28)
ಪಂದ್ಯಶ್ರೇಷ್ಠ: ಕರುಣ್ ನಾಯರ್.







