ರಣಜಿ: ಫಾಲೋ ಆನ್ ಗೆ ಸಿಲುಕಿದ ಕೇರಳ, ಗೆಲುವಿನ ವಿಶ್ವಾಸದಲ್ಲಿ ಕರ್ನಾಟಕ

PC : PTI
ತಿರುವನಂತಪುರ, ನ.3: ವೇಗಿಗಳಾದ ವಿದ್ವತ್ ಕಾವೇರಪ್ಪ (4-42),ವಿಜಯಕುಮಾರ್ ವೈಶಾಕ್(3-62) ಹಾಗೂ ಶಿಖರ್ ಶೆಟ್ಟಿ(2-53) ಅವರ ಅತ್ಯುತ್ತಮ ಬೌಲಿಂಗ್ ದಾಳಿಯ ನೆರವಿನಿಂದ ಕೆಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಕೇರಳ ತಂಡಕ್ಕೆ ಫಾಲೋ ಆನ್ ವಿಧಿಸಿದೆ. ಈ ವರ್ಷ ಮೊದಲ ಗೆಲುವಿನ ಹಾದಿಯಲ್ಲಿದೆ.
ಕಾವೇರಪ್ಪ,ವೈಶಾಕ್ ಹಾಗೂ ಶಿಖರ್ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ಸಿಲುಕಿದ ಕೇರಳ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 238 ರನ್ ಗಳಿಸಿ ಆಲೌಟಾಯಿತು. ಫಾಲೋ ಆನ್ಗೆ ಸಿಲುಕಿದ ಕೇರಳ ತಂಡವು ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.
ಆರಂಭಿಕ ಬ್ಯಾಟರ್ಗಳಾದ ಕೃಷ್ಣ ಪ್ರಸಾದ್(2ರನ್)ಹಾಗೂ ಎಂ.ಡಿ. ನಿಧೀಶ್(4 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇದಕ್ಕೂ ಮೊದಲು ಕೇರಳ ತಂಡವು 3 ವಿಕೆಟ್ಗಳ ನಷ್ಟಕ್ಕೆ 21 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. 6 ರನ್ನಿಂದ ಬ್ಯಾಟಿಂಗ್ ಮುಂದುವರಿಸಿದ್ದ ಅಕ್ಷಯ್ ಚಂದ್ರನ್(11ರನ್)ವಿಕೆಟನ್ನು ಕಾವೇರಪ್ಪ(4-42) ಬೇಗನೆ ಉರುಳಿಸಿದರು. ಆನಂತರ ಎನ್.ಪಿ. ಬಾಸಿಲ್ ಬೌನ್ಸರ್ ಎಸೆತವೊಂದು ತಲೆಗೆ ಅಪ್ಪಳಿಸಿದ ಕಾರಣ ಗಾಯಗೊಂಡು ನಿವೃತ್ತಿಯಾದರು. ಆಗ ಬಾಬಾ ಅಪರಾಜಿತ್ ಹಾಗೂ ಸಚಿನ್ ಬೇಬಿ 5ನೇ ವಿಕೆಟ್ಗೆ 86 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಕಾವೇರಪ್ಪ ಬೌಲಿಂಗ್ ನಲ್ಲಿ 2 ಸಿಕ್ಸರ್ಗಳನ್ನು ಸಿಡಿಸಿದ ಅಪರಾಜಿತ್ ಭೋಜನ ವಿರಾಮಕ್ಕೆ ಮೊದಲು ತನ್ನ ಅರ್ಧಶತಕ ಪೂರೈಸಿದರು. ಆದರೆ ಸಚಿನ್ ಬೇಬಿ 82 ಎಸೆತಗಳಲ್ಲಿ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಸ್ಪಿನ್ನರ್ಗಳ ಮೇಲೆ ಪ್ರಾಬಲ್ಯ ಸಾಧಿಸಿದ ಅಪರಾಜಿತ್ ಅವರು ಅಹ್ಮದ್ ಇಮ್ರಾನ್ (31 ರನ್) ಅವರೊಂದಿಗೆ 6ನೇ ವಿಕೆಟ್ಗೆ 68 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಶತಕದತ್ತ ಚಿತ್ತ ಹರಿಸಿದ್ದ ಅಪರಾಜಿತ್ 159 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ಗಳ ಸಹಿತ 88 ರನ್ ಗಳಿಸಿದ್ದಾಗ ಎಡಗೈ ಸ್ಪಿನ್ನರ್ ಶಿಖರ್ ಶೆಟ್ಟಿ ಎಸೆತವನ್ನು ಕೆಣಕಲು ಹೋಗಿ ಕೆ.ವಿ. ಅನೀಶ್ಗೆ ಕ್ಯಾಚ್ ನೀಡಿದರು. ಇಮ್ರಾನ್ ಅವರು ಶ್ರೇಯಸ್ ಗೋಪಾಲ್ ವಿರುದ್ಧ ಆಕ್ರಮಣಕಾರಿ ಆಟಕ್ಕೆ ಮುಂದಾಗಿ ವಿಕೆಟ್ಕೀಪರ್ ಕೆ. ಶ್ರೀಜಿತ್ರಿಂದ ಸ್ಟಂಪಿಂಗ್ ಗೆ ಒಳಗಾದರು.
ನಾಯಕ ಮುಹಮ್ಮದ್ ಅಝರುದ್ದೀನ್(6ರನ್)ವಿಕೆಟನ್ನು ಉರುಳಿಸಿದ ಶಿಖರ್ ಶೆಟ್ಟಿ ಕೇರಳದ ಸಂಕಷ್ಟಕ್ಕೆ ಹೆಚ್ಚಿಸಿದರು. ಶಾನ್ ರೋಜರ್(29ರನ್)ಹಾಗೂ ಬದಲಿ ಆಟಗಾರ ಏಡೆನ್ ಟಾಮ್(ಔಟಾಗದೆ 10)ಸುಮಾರು 18 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿ ಕರ್ನಾಟಕದ ಬೌಲರ್ಗಳಿಗೆ ನಿರಾಶೆಗೊಳಿಸಿದರು.
ಶಾನ್ ಪ್ರತಿರೋಧವನ್ನು ಹತ್ತಿಕ್ಕಿದ ವೈಶಾಕ್(3-62)ಅವರು ಎಂ.ಯು. ಹರಿಕೃಷ್ಣನ್(6ರನ್)ವಿಕೆಟನ್ನು ಉರುಳಿಸಿ ಕೇರಳದ ಇನಿಂಗ್ಸ್ಗೆ ತೆರೆ ಎಳೆದರು.
ಕರ್ನಾಟಕ ತಂಡವು ತನ್ನ ಮೊದಲ ಇನಿಂಗ್ಸ್ನಲ್ಲಿ 5 ವಿಕೆಟ್ಗಳ ನಷ್ಟಕ್ಕೆ 586 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ.







