ರಣಜಿ ಪಂದ್ಯ | ಅದಲು-ಬದಲಾದ ಸರ್ಫರಾಝ್-ಮುಶೀರ್ ಖಾನ್!

ಸರ್ಫರಾಝ್-ಮುಶೀರ್ ಖಾನ್ | Photo Credit : PTI
ಹೊಸದಿಲ್ಲಿ, ಅ. 15: ರಣಜಿ ಪಂದ್ಯದಲ್ಲಿ ಮುಂಬೈ ಬ್ಯಾಟರ್ ಮುಶೀರ್ ಖಾನ್ರನ್ನು ಅವರ ಅಣ್ಣ ಸರ್ಫರಾಝ್ ಖಾನ್ ಎಂಬುದಾಗಿ ಭಾವಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)ಅಧಿಕಾರಿಗಳು ಮುಜುಗರಕ್ಕೊಳಗಾದ ಘಟನೆ ಬುಧವಾರ ನಡೆದಿದೆ.
2025ರ ಋತುವಿನ ರಣಜಿ ಟ್ರೋಫಿ ಪಂದ್ಯಾವಳಿಯು ಬುಧವಾರ ಆರಂಭಗೊಂಡಿತು. ಶ್ರೀನಗರದಲ್ಲಿ ನಡೆಯುತ್ತಿರುವ ಮುಂಬೈ ಹಾಗೂ ಜಮ್ಮು ಮತ್ತು ಕಾಶ್ಮೀರ ತಂಡಗಳ ನಡುವಿನ ಪಂದ್ಯದ ಮೊದಲ ದಿನದಂದು ಈ ತಪ್ಪು ಸಂಭವಿಸಿದೆ. ಬಿಸಿಸಿಐ ವೆಬ್ಸೈಟ್ನಲ್ಲಿ ಪ್ರಕಟಗೊಂಡ ಅಧಿಕೃತ ಸ್ಕೋರ್ ಪಟ್ಟಿಯ ಪ್ರಕಾರ, ಸರ್ಫರಾಝ್ ಇನಿಂಗ್ಸ್ ಆರಂಭಿಸಿದರು ಮತ್ತು ವೇಗಿ ಆಕಿಬ್ ನಬಿ ಎಸೆತದಲ್ಲಿ ಶೂನ್ಯಕ್ಕೆ ಔಟಾದರು. ಇದನ್ನು ಮಾಧ್ಯಮಗಳು ಪ್ರಸಾರ ಮಾಡಿದವು ಮತ್ತು ಆನ್ಲೈನ್ನಲ್ಲಿ ಒಂದು ರೀತಿಯ ಕಾವೇರಿದ ವಾತಾವರಣಕ್ಕೆ ಕಾರಣವಾಯಿತು.
ಆದರೆ ಸತ್ಯ ಹೊರಬಂದಾಗ ವಾಸ್ತವ ಬೇರೆಯೇ ಆಗಿತ್ತು. ಶೂನ್ಯಕ್ಕೆ ಔಟಾದದ್ದು ಸರ್ಫರಾಝ್ ಅಲ್ಲ, ಅವರ ತಮ್ಮ ಮುಶೀರ್ ಎಂದು ಗೊತ್ತಾಯಿತು. ಮುಶೀರ್ ಮುಂಬೈಯ ಆರಂಭಿಕ ಬ್ಯಾಟರ್ ಆಗಿ ಕಣಕ್ಕಿಳಿದಿದ್ದರು. ಸ್ಕೋರರ್ರ ತಪ್ಪು ವ್ಯಾಪಕ ಗೊಂದಲಕ್ಕೆ ಕಾರಣವಾಗಿತ್ತು.
ಸರ್ಫರಾಝ್ ಖಾನ್ ಮಧ್ಯಮ ಸರದಿಯ ಪ್ರಧಾನ ಆಟಗಾರರಾಗಿದ್ದಾರೆ. ಅವರು ಸಾಮಾನ್ಯವಾಗಿ 4 ಅಥವಾ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ.
ತಪ್ಪು ಗಮನಕ್ಕೆ ಬಂದಾಗ ಸ್ಕೋರ್ಪಟ್ಟಿಯನ್ನು ಸರಿಪಡಿಸಲಾಯಿತು. ಆದರೆ, ಅದಕ್ಕೂ ಮೊದಲು ‘‘ಸರ್ಫರಾಜ್ ಶೂನ್ಯಕ್ಕೆ ಔಟ್’’ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.







