ರಣಜಿ ಸೆಮಿ ಫೈನಲ್ | ಪಾರ್ಥಗೆ ಮೂರು ವಿಕೆಟ್, ಮುಂಬೈ ವಿರುದ್ಧ ವಿದರ್ಭ ಬಿಗಿ ಹಿಡಿತ

PC : PTI
ನಾಗ್ಪುರ : ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದ 2ನೇ ದಿನವಾದ ಮಂಗಳವಾರ ವಿದರ್ಭ ತಂಡದ ಮೊದಲ ಇನಿಂಗ್ಸ್ 338 ರನ್ಗೆ ಉತ್ತರಿಸಹೊರಟಿರುವ ಮುಂಬೈ ಕ್ರಿಕೆಟ್ ತಂಡವು ಎಡಗೈ ಸ್ಪಿನ್ನರ್ ಪಾರ್ಥ ರೆಖಾಡೆ ದಾಳಿಗೆ ಸಿಲುಕಿ 188 ರನ್ಗೆ 7 ವಿಕೆಟ್ಗಳನ್ನು ಕಳೆದುಕೊಂಡಿದೆ.
ಸದ್ಯ ಹಾಲಿ ಚಾಂಪಿಯನ್ ಮುಂಬೈ ತಂಡವು 195 ರನ್ ಹಿನ್ನಡೆಯಲ್ಲಿದೆ. ವಿಸಿಎ ಕ್ರೀಡಾಂಗಣದಲ್ಲಿ ವಿದರ್ಭ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಎದುರಿಸುತ್ತಿರುವ ಮುಂಬೈ ತಂಡ ಪ್ರಶಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದೆ.
ಕೇವಲ ಮೂರು ವಿಕೆಟ್ ಕೈಯಲ್ಲಿ ಹೊಂದಿರುವ ಮುಂಬೈ ತಂಡವು ಭಾರೀ ಹಿನ್ನಡೆಯಲ್ಲಿದ್ದು, 3ನೇ ದಿನದಾಟಕ್ಕಿಂತ ಮೊದಲು ವಿದರ್ಭ ಮೇಲುಗೈ ಸಾಧಿಸಿದೆ.
ಆರಂಭಿಕ ಆಟಗಾರ ಆಕಾಶ್ ಆನಂದ್ ಔಟಾಗದೆ 67 ರನ್ ಗಳಿಸಿ ಕ್ರೀಸ್ಗೆ ಅಂಟಿಕೊಂಡಿದ್ದರೆ, ತನುಶ್ ಕೋಟ್ಯಾನ್(ಔಟಾಗದೆ 5)ಅವರು ಆನಂದ್ಗೆ ಸಾಥ್ ನೀಡುತ್ತಿದ್ದಾರೆ.
ಮುಂಬೈ ಒಂದು ಹಂತದಲ್ಲಿ 2 ವಿಕೆಟ್ಗಳ ನಷ್ಟಕ್ಕೆ 113 ರನ್ ಗಳಿಸಿತ್ತು. ಕೇವಲ 2ನೇ ಪ್ರಥಮ ದರ್ಜೆ ಪಂದ್ಯವನ್ನಾಡುತ್ತಿರುವ ಪಾರ್ಥ ಅವರು ಮುಂಬೈನ ನಾಟಕೀಯ ಕುಸಿತಕ್ಕೆ ಕಾರಣರಾದರು. 41ನೇ ಓವರ್ನಲ್ಲಿ ನಾಯಕ ಅಜಿಂಕ್ಯ ರಹಾನೆ(18 ರನ್)ವಿಕೆಟ್ಟನ್ನು ಕಬಳಿಸಿದ ಪಾರ್ಥ, ವಿದರ್ಭ ತಂಡಕ್ಕೆ ಮೇಲುಗೈ ಒದಗಿಸಿದರು.
2 ಎಸೆತಗಳ ನಂತರ ಸೂರ್ಯಕುಮಾರ್ ಯಾದವ್(0)ವಿಕೆಟನ್ನು ಉರುಳಿಸಿದರು. ಕೆಲವು ಎಸೆತಗಳ ನಂತರ ಆಲ್ರೌಂಡರ್ ಶಿವಂ ದುಬೆ(0)ಕೂಡ ಶೂನ್ಯಕ್ಕೆ ಔಟಾದರು. 2 ವಿಕೆಟ್ಗೆ 113 ರನ್ ಗಳಿಸಿದ್ದ ಮುಂಬೈ ತಂಡವು 113 ರನ್ಗೆ 5ನೇ ವಿಕೆಟ್ ಕಳೆದುಕೊಂಡಿತು. ಶಮ್ಸ್ ಮುಲಾನಿ(4 ರನ್) ಅವರು ಹರ್ಷ ದುಬೆಗೆ ವಿಕೆಟ್ ಒಪ್ಪಿಸಿದಾಗ ಮುಂಬೈ ತಂಡ 118 ರನ್ಗೆ 6ನೇ ವಿಕೆಟ್ ಕಳೆದುಕೊಂಡಿತು. ಆಗ 7ನೇ ವಿಕೆಟ್ಗೆ ನಿರ್ಣಾಯಕ 60 ರನ್ ಜೊತೆಯಾಟ ನಡೆಸಿದ ಆನಂದ್ ಹಾಗೂ ಶಾರ್ದೂಲ್ ಠಾಕೂರ್ ತಂಡವನ್ನು ಆಧರಿಸಲು ಯತ್ನಿಸಿದರು.
ಹೋರಾಟಕಾರಿ ಇನಿಂಗ್ಸ್ಗೆ ಖ್ಯಾತಿ ಪಡೆದಿರುವ ಠಾಕೂರ್ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 37 ರನ್ ಗಳಿಸಿ ಔಟಾದರು.
3ನೇ ಕ್ರಮಾಂಕದ ಬ್ಯಾಟರ್ ಸಿದ್ದೇಶ್ ಲಾಡ್(35 ರನ್)ವಿಕೆಟನ್ನು ಉರುಳಿಸಿ 2ನೇ ವಿಕೆಟ್ ಜೊತೆಯಾಟವನ್ನು ಮುರಿದಿದ್ದ ಯಶ್ ಠಾಕೂರ್(2-56), ಠಾಕೂರ್ಗೆ ಪೆವಿಲಿಯನ್ ಹಾದಿ ತೋರಿಸಿದರು.
ಆರಂಭಿಕ ಆಟಗಾರ ಆಯುಷ್ ಮ್ಹಾತ್ರೆ(9 ರನ್) ವಿಕೆಟನ್ನು ಬೇಗನೆ ಕಳೇದುಕೊಂಡ ಮುಂಬೈ ತಂಡ ಕಳಪೆ ಆರಂಭ ಪಡೆಯಿತು. ಲಾಡ್ ಹಾಗೂ ಆನಂದ್ ಇನಿಂಗ್ಸ್ ಆಧರಿಸಲು ಮುಂದಾದರು. ಆದರೆ ಉತ್ತಮ ದಾಳಿ ನಡೆಸಿದ ವಿದರ್ಭ ತಂಡ ಮುಂಬೈ ತಂಡವನ್ನು ಒತ್ತಡಕ್ಕೆ ಸಿಲುಕಿಸಿತು.
ಇದಕ್ಕೂ ಮೊದಲು ವಿದರ್ಭ ತಂಡ 5 ವಿಕೆಟ್ಗಳ ನಷ್ಟಕ್ಕೆ 308 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿತು. ನಿನ್ನೆಯ ಮೊತ್ತಕ್ಕೆ 75 ರನ್ ಸೇರಿಸಿ ಆಲೌಟಾಯಿತು. ರಾಥೋಡ್ 113 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 54 ರನ್ ಗಳಿಸಿ ಔಟಾದರು.
ಸಂಕ್ಷಿಪ್ತ ಸ್ಕೋರ್
ವಿದರ್ಭ ಮೊದಲ ಇನಿಂಗ್ಸ್: 383 ರನ್ಗೆ ಆಲೌಟ್
(ಧ್ರುವ್ ಶೋರೆ 74, ದಾನಿಶ್ ಮಾಲೆವಾರ್ 79, ಯಶ್ ರಾಥೋಡ್ 54, ಶಿವಂ ದುಬೆ 5/49, ಶಮ್ಸ್ ಮುಲಾನಿ 2/62)
ಮುಂಬೈ ಮೊದಲ ಇನಿಂಗ್ಸ್: 188/7
(ಆಕಾಶ್ ಆನಂದ್ ಔಟಾಗದೆ 67, ಯಶ್ ಠಾಕೂರ್ 2/56, ಪಾರ್ಥ ರೆಖಾಡೆ 3/16)
►ಮುಹಮ್ಮದ್ ಅಝರುದ್ದೀನ್ ಔಟಾಗದೆ 149
ಗುಜರಾತ್ ತಂಡದ ವಿರುದ್ಧ ಕೇರಳ 418/7
ಅಹ್ಮದಾಬಾದ್ ನಲ್ಲಿ ನಡೆಯುತ್ತಿರುವ ರಣಜಿಯ ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಮುಹಮ್ಮದ್ ಅಝರುದ್ದೀನ್ ಹೋರಾಟಕಾರಿ ಶತಕದ(ಔಟಾಗದೆ 149 ರನ್)ನೆರವಿನಿಂದ ಕೇರಳ ಕ್ರಿಕೆಟ್ ತಂಡವು ಗುಜರಾತ್ ತಂಡದ ವಿರುದ್ಧ ರಣಜಿ ಟ್ರೋಫಿ ಟೂರ್ನಿಯ ಮೊದಲ ಸೆಮಿ ಫೈನಲ್ನಲ್ಲಿ ಬೃಹತ್ ಮೊತ್ತ ಗಳಿಸುವ ಹಾದಿಯಲ್ಲಿದೆ.
ಕೇರಳ ತಂಡ ಸೋಮವಾರ 2ನೇ ದಿನದಾಟದಂತ್ಯಕ್ಕೆ 7 ವಿಕೆಟ್ಗಳ ನಷ್ಟಕ್ಕೆ 418 ರನ್ ಗಳಿಸಿದೆ.
4 ವಿಕೆಟ್ಗಳ ನಷ್ಟಕ್ಕೆ 206 ರನ್ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಕೇರಳ ತಂಡವು ಔಟಾಗದೆ 69 ರನ್ ಗಳಿಸಿದ್ದ ನಾಯಕ ಸಚಿನ್ ಬೇಬಿ ವಿಕೆಟನ್ನು ಕಳೆದುಕೊಂಡು ಆಘಾತ ಎದುರಿಸಿತು. ಎಡಗೈ ವೇಗಿ ಅರ್ಝಾನ್ ದಿನದ 2ನೇ ಎಸೆತದಲ್ಲಿ ಸಚಿನ್ ವಿಕೆಟನ್ನು ಪಡೆಯುವಲ್ಲಿ ಶಕ್ತರಾದರು. ಸಚಿನ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೆ ಔಟಾದರು.
ಆಗ ಸಲ್ಮಾನ್ ನಿಝಾರ್(52 ರನ್, 202 ಎಸೆತ)ಜೊತೆ 149 ರನ್ ಜೊತೆಯಾಟದಲ್ಲಿ ಭಾಗಿಯಾದ ಅಝರುದ್ದೀನ್ ಕೇರಳ ತಂಡದ ಮೊತ್ತವನ್ನು 350 ರನ್ ಗಡಿ ದಾಟಿಸಿದರು.
30 ರನ್ನಿಂದ ತನ್ನ ಬ್ಯಾಟಿಂಗ್ ಮುಂದುವರಿಸಿದ ಅಝರುದ್ದೀನ್ ಇಡೀ ದಿನ ಆಡಿದ್ದು 303 ಎಸೆತಗಳನ್ನು ಎದುರಿಸಿ 17 ಬೌಂಡರಿಗಳ ಸಹಿತ ಔಟಾಗದೆ 149 ರನ್ ಗಳಿಸಿದರು. 2015ರಲ್ಲಿ ರಣಜಿಗೆ ಕಾಲಿಟ್ಟ ನಂತರ ಅಝರ್ 7 ವರ್ಷಗಳ ನಂತರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಿಡಿಸಿದ 2ನೇ ಶತಕ ಇದಾಗಿದೆ.
ಗುಜರಾತ್ ಬೌಲಿಂಗ್ ವಿಭಾಗದಲ್ಲಿ ಅರ್ಝಾನ್ ನಾಗ್ವಾಸ್ವಾಲಾ (3/64)ಯಶಸ್ವಿ ಪ್ರದರ್ಶನ ನೀಡಿದರು.
ಕೇರಳ ತಂಡವು ಸುಸ್ಥಿತಿಯಲ್ಲಿದ್ದರೂ ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಎಚ್ಚರಿಕೆಯ ಆಟಕ್ಕೆ ಮೊರೆ ಹೋಗಿದ್ದು ಎಲ್ಲರನ್ನು ಅಚ್ಚರಿಗೊಳಿಸಿದೆ. ಮೊದಲದಿನದಲ್ಲಿ 206 ರನ್ ಗಳಿಸಿದ್ದ ಕೇರಳ ತಂಡವು 2ನೇ ದಿನದಾಟದಲ್ಲಿ ಕೇವಲ 212 ರನ್ ಕಲೆ ಹಾಕಿ ಗುಜರಾತ್ ಹೋರಾಟಕ್ಕೆ ಅವಕಾಶ ನೀಡಿತು.
ಮೊದಲ ಇನಿಂಗ್ಸ್ ಮುನ್ನಡೆಯತ್ತ ಕಣ್ಣಿಟ್ಟಿರುವ ಕೇರಳ ತಂಡವು 3ನೇ ದಿನದಾಟದಲ್ಲಿ ಸಾಧ್ಯವಾದಷ್ಟು ಹೊತ್ತು ಬ್ಯಾಟಿಂಗ್ ಮಾಡುವ ಗುರಿ ಇಟ್ಟುಕೊಂಡಿದೆ. ಸೆಮಿ ಫೈನಲ್ ಪಂದ್ಯದ ಮೇಲೆ ಮತ್ತೆ ಹಿಡಿತ ಸಾಧಿಸಬೇಕಾದರೆ ಗುಜರಾತ್ ತಂಡ ಉತ್ತಮ ಬ್ಯಾಟಿಂಗ್ ಮಾಡುವ ಅಗತ್ಯವಿದೆ.
ಸಂಕ್ಷಿಪ್ತ ಸ್ಕೋರ್
ಕೇರಳ ಮೊದಲ ಇನಿಂಗ್ಸ್: 418/7
(ಮುಹಮ್ಮದ್ ಅಝರುದ್ದೀನ್ ಔಟಾಗದೆ 149, ಅರ್ಝಾನ್ ನಾಗ್ವಾಸ್ವಾಲಾ 3/64)







