ರಣಜಿ ಟ್ರೋಫಿ 2025-26 : ಪಡಿಕ್ಕಲ್, ಕರುಣ್ ಶತಕದ ಜೊತೆಯಾಟ

Photo Credit: VIJAY SONEJI
ರಾಜ್ಕೋಟ್, ಅ.15: ದೇವದತ್ತ ಪಡಿಕ್ಕಲ್(96 ರನ್, 141 ಎಸೆತ, 11 ಬೌಂಡರಿ)ಹಾಗೂ ಕರುಣ್ ನಾಯರ್(73 ರನ್, 126 ಎಸೆತ, 9 ಬೌಂಡರಿ)ಮೂರನೇ ವಿಕೆಟ್ಗೆ ಸೇರಿಸಿದ ನಿರ್ಣಾಯಕ 146 ರನ್ ಜೊತೆಯಾಟದ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡವು ಬುಧವಾರ ಆರಂಭವಾದ 2025-26ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯ ‘ಬಿ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಸೌರಾಷ್ಟ್ರದ ವಿರುದ್ಧ 5 ವಿಕೆಟ್ಗಳ ನಷ್ಟಕ್ಕೆ 295 ರನ್ ಗಳಿಸಿ ಬಿಗಿ ಹಿಡಿತ ಸಾಧಿಸಿದೆ.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡಿರುವ ಕರ್ನಾಟಕದ ನಾಯಕ ಮಯಾಂಕ್ ಅಗರ್ವಾಲ್ (2 ರನ್) ಹಾಗೂ ಎಸ್. ನಿಕಿನ್(12 ರನ್) ನಾಯಕ ಜಯದೇವ್ ಉನದ್ಕಟ್ ಹಾಗೂ ಚೇತನ್ ಸಕಾರಿಯಾ ಅವರ ಶಿಸ್ತುಬದ್ದ ದಾಳಿಗೆ ತತ್ತರಿಸಿ ಒತ್ತಡಕ್ಕೆ ಸಿಲುಕಿದರು.
ಉನದ್ಕಟ್ ಬೇಗನೆ ಸ್ಪಿನ್ನರ್ ಕಣಕ್ಕಿಳಿಸಿ ಮೇಲುಗೈ ಪಡೆದರು. ಎಡಗೈ ಸ್ಪಿನ್ನರ್ ಧರ್ಮೇಂದ್ರ ಜಡೇಜ (4-100)ಇಬ್ಬರು ಆರಂಭಿಕರಾದ-ಮಯಾಂಕ್ ಹಾಗೂ ನಿಕಿನ್ ವಿಕೆಟ್ಗಳನ್ನು ಪಡೆದರು. ಆಗ ಕರ್ನಾಟಕ 26 ರನ್ಗೆ 2 ವಿಕೆಟ್ ಕಳೆದುಕೊಂಡಿತು.
ಆಗ ಜೊತೆಯಾದ ಪಡಿಕ್ಕಲ್ ಹಾಗೂ ಕರುಣ್ ತಾಳ್ಮೆಯ ಆಟವಾಡಿ ಇನಿಂಗ್ಸ್ ಆಧರಿಸಿದರು. ಕರುಣ್ ವಿಕೆಟನ್ನು ಪಡೆದ ಜಡೇಜ ಈ ಜೋಡಿಯನ್ನು ಬೇರ್ಪಡಿಸಿದರು. ಜಡೇಜಗೆ ಕ್ಲೀನ್ಬೌಲ್ಡಾದ ಪಡಿಕ್ಕಲ್ ಶತಕ ವಂಚಿತರಾದರು.
ಆರ್. ಸ್ಮರಣ್(66 ಬ್ಯಾಟಿಂಗ್, 120 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ಶ್ರೇಯಸ್ ಗೋಪಾಲ್(38 ಬ್ಯಾಟಿಂಗ್, 69 ಎಸೆತ, 2 ಬೌಂಡರಿ,2 ಸಿಕ್ಸರ್)ಆರನೇ ವಿಕೆಟ್ಗೆ 81 ರನ್ ಸೇರಿಸಿ ಪ್ರವಾಸಿ ತಂಡವು ಮೊದಲ ದಿನದಾಟದಂತ್ಯಕ್ಕೆ 5 ವಿಕೆಟ್ಗಳ ನಷ್ಟಕ್ಕೆ 295 ರನ್ ಗಳಿಸುವಲ್ಲಿ ನೆರವಾದರು.
ಸಂಕ್ಷಿಪ್ತ ಸ್ಕೋರ್
ಕರ್ನಾಟಕ ಮೊದಲ ಇನಿಂಗ್ಸ್: 295/5
(ದೇವದತ್ತ ಪಡಿಕ್ಕಲ್ 96, ಕರುಣ್ ನಾಯರ್ 73, ಆರ್.ಅಶ್ವಿನ್ ಔಟಾಗದೆ 66, ಶ್ರೇಯಸ್ ಗೋಪಾಲ್ ಔಟಾಗದೆ 38, ಧರ್ಮೇಂದ್ರಸಿನ್ಹಾ ಜಡೇಜ 4-100)







