ರಣಜಿ ಟ್ರೋಫಿ|ಕರ್ನಾಟಕದ ವಿರುದ್ಧ ಪಂಜಾಬ್ಗೆ 303/9| ಅಭಿಜೀತ್, ಎಮನ್ಜೋತ್ ಅರ್ಧಶತಕ

Photo Credit : X
ಮೊಹಾಲಿ, ಜ.29: ಆರಂಭಿಕ ಬ್ಯಾಟರ್ ಅಭಿಜೀತ್ ಗರ್ಗ್(81 ರನ್, 133 ಎಸೆತ, 8 ಬೌಂಡರಿ, 2 ಸಿಕ್ಸರ್)ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಎಮನ್ಜೋತ್ ಸಿಂಗ್ ಚಾಹಲ್(ಔಟಾಗದೆ 77, 134 ಎಸೆತ, 8 ಬೌಂಡರಿ,1 ಸಿಕ್ಸರ್)ಅರ್ಧಶತಕಗಳ ಕೊಡುಗೆಯ ಸಹಾಯದಿಂದ ಆತಿಥೇಯ ಪಂಜಾಬ್ ತಂಡ ಕರ್ನಾಟಕ ಕ್ರಿಕೆಟ್ ತಂಡದ ವಿರುದ್ಧ್ದ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಗಳಿಸಿದೆ.
ಐ.ಎಸ್.ಬಿಂದ್ರಾ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಗುರುವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಂಜಾಬ್ ತಂಡವು ದಿನದಾಟದಂತ್ಯಕ್ಕೆ 91 ಓವರ್ಗಳಲ್ಲಿ 9 ವಿಕೆಟ್ಗಳ ನಷ್ಟಕ್ಕೆ 303 ರನ್ ಗಳಿಸಿದೆ.
ಎಮನ್ಜೋತ್ ಸಿಂಗ್(ಔಟಾಗದೆ 77 ರನ್)ಹಾಗೂ ಅನ್ಮೋಲ್ಜೀತ್ ಸಿಂಗ್(0) ಕ್ರೀಸ್ ಕಾಯ್ದುಕೊಂಡಿದ್ದಾರೆ.
ತಲಾ ಮೂರು ವಿಕೆಟ್ಗಳನ್ನು ಕಬಳಿಸಿರುವ ವಿದ್ಯಾಧರ ಪಾಟೀಲ್(3-46)ಹಾಗೂ ಶ್ರೇಯಸ್ ಅಯ್ಯರ್(3-48) ಪಂಜಾಬ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಲು ಯತ್ನಿಸಿದರು. ಮುಹ್ಸಿನ್ ಖಾನ್(2-85) ಹಾಗೂ ಪ್ರಸಿದ್ಧ ಕೃಷ್ಣ(1-58) ಮೂರು ವಿಕೆಟ್ಗಳನ್ನು ಹಂಚಿಕೊಂಡರು.
3.1ನೇ ಓವರ್ನಲ್ಲಿ ಆರಂಭಿಕ ಬ್ಯಾಟರ್ ಪ್ರಭುಸಿಮ್ರಾನ್ ಸಿಂಗ್(5 ರನ್)ವಿಕೆಟನ್ನು ಬೇಗನೆ ಕಳೆದುಕೊಂಡ ಪಂಜಾಬ್ ತಂಡ ನೀರಸ ಆರಂಭ ಪಡೆಯಿತು. ವಿದ್ಯಾಧರ ಪಾಟೀಲ್ ಕರ್ನಾಟಕ ತಂಡಕ್ಕೆ ಆರಂಭಿಕ ಮೇಲುಗೈ ಒದಗಿಸಿದರು.
ಆಗ ಜೊತೆಯಾದ ಅಭಿಜೀತ್ ಹಾಗೂ ನಾಯಕ ಉದಯ್ ಸಹರಾನ್(44 ರನ್, 72 ಎಸೆತ)ಎರಡನೇ ವಿಕೆಟ್ಗೆ 102 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಸಹರಾನ್, ಜಶನ್ಪ್ರೀತ್ ಸಿಂಗ್(6 ರನ್) ಹಾಗೂ ಅನ್ಮೋಲ್ಪ್ರೀತ್ ಸಿಂಗ್ (0)ಬೆನ್ನುಬೆನ್ನಿಗೆ ಔಟಾದಾಗ ಪಂಜಾಬ್ 119 ರನ್ಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು.
ಅನ್ಮೋಲ್ ಮಲ್ಹೋತ್ರಾ(25 ರನ್)ಹಾಗೂ ಅಭಿಜೀತ್ 47 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆದರೆ, ಅನ್ಮೋಲ್ ಹಾಗೂ ಅಭಿಜೀತ್ ಪೆವಿಲಿಯನ್ಗೆ ಪರೇಡ್ ನಡೆಸಿದರು.
ಆಯುಷ್ ಗೋಯಲ್(23 ರನ್)ಹಾಗೂ ಎಮನ್ಜೋತ್ ಸಿಂಗ್ ಅವರು ಏಳನೇ ವಿಕೆಟ್ಗೆ 81 ರನ್ ಸೇರಿಸಿ ತಂಡದ ಮೊತ್ತವನ್ನು 249ಕ್ಕೆ ತಲುಪಿಸಿದರು.
ಮಯಾಂಕ್ ಅಗರ್ವಾಲ್ ಅನುಪಸ್ಥಿತಿಯಲ್ಲಿ ಕರ್ನಾಟಕ ತಂಡವನ್ನು ದೇವದತ್ತ ಪಡಿಕ್ಕಲ್ ನಾಯಕನಾಗಿ ಮುನ್ನಡೆಸಿದರು.
ಪಂಜಾಬ್ ಮೊದಲ ಇನಿಂಗ್ಸ್: 303/9
(ಅಭಿಜೀತ್ ಗರ್ಗ್ 81, ಎಮನ್ಜೋತ್ ಸಿಂಗ್ ಔಟಾಗದೆ 77, ಉದಯ್ ಸಹರಾನ್ 44, ವಿದ್ಯಾಧರ ಪಾಟೀಲ್ 3-46, ಶ್ರೇಯಸ್ ಗೋಪಾಲ್ 3-48, ಮುಹ್ಸಿನ್ ಖಾನ್ 2-85)







