Ranji Trophy | ಅಲ್ಪ ಮೊತ್ತಕ್ಕೆ ಔಟಾದ ಶುಭಮನ್ ಗಿಲ್

ಶುಭಮನ್ ಗಿಲ್ | Photo Credit : PTI
ನ್ಯೂ ಚಂಡಿಗಡ, ಅ.18: ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ರಣಜಿ ಟ್ರೋಫಿ ಟೂರ್ನಿಗೆ ವಾಪಸಾಗಿದ್ದು, ರವಿವಾರ ನ್ಯೂ ಪಿಸಿಎ ಸ್ಟೇಡಿಯಂನಲ್ಲಿ ಛತ್ತೀಸ್ ಗಡ ವಿರುದ್ಧ ಆರಂಭವಾದ ಪಂದ್ಯದಲ್ಲಿ ಪಂಜಾಬ್ ಪರ ಅಲ್ಪ ಮೊತ್ತಕ್ಕೆ ಔಟಾದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಗಿಲ್ ಕೇವಲ ಐದು ಎಸೆತಗಳನ್ನು ಎದುರಿಸಿದರು. ಎಡಗೈ ಸ್ಪಿನ್ನರ್ ಅಜಯ್ ಮಂಡಲ್ ಅವರ ಬೌಲಿಂಗ್ನಲ್ಲಿ ಕ್ಲೀನ್ಬೌಲ್ಡ್ ಆಗುವ ಮೊದಲು ಒಂದು ರನ್ ಗಳಿಸಿದರು.
27ರ ಹರೆಯದ ಗಿಲ್ ರಣಜಿ ಟೂರ್ನಿಯ ಆರಂಭಿಕ ಸುತ್ತಿನ ಪಂದ್ಯದಿಂದ ವಂಚಿತರಾಗಿದ್ದರು. ಆರು ವಾರಗಳ ಸುದೀರ್ಘ ಕ್ರಿಕೆಟ್ ಪ್ರವಾಸಕ್ಕಾಗಿ ನ್ಯೂಝಿಲೆಂಡ್ ಗೆ ಪ್ರಯಾಣಿಸುವ ಮೊದಲು ಆಡಿದ ಈ ರಣಜಿ ಪಂದ್ಯದಲ್ಲಿ ಗಿಲ್ ನೀರಸ ಪ್ರದರ್ಶನ ನೀಡಿದರು.
ಗಿಲ್ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಕ್ರಿಕೆಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಟೀಮ್ ಇಂಡಿಯಾ ಈ ಸರಣಿಯ ಮೂಲಕ 2027ರ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ನಡೆಸುವುದರ ಜೊತೆಗೆ, ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ಗೆ ಅರ್ಹತೆ ಪಡೆಯುವ ರೇಸ್ನಲ್ಲಿ ಉಳಿಯುವ ವಿಶ್ವಾಸದಲ್ಲಿದೆ.




