ರಣಜಿ | ದಿಲ್ಲಿ ವಿರುದ್ಧ ಜಮ್ಮು- ಕಾಶ್ಮೀರಕ್ಕೆ ಐತಿಹಾಸಿಕ ಮೊದಲ ಗೆಲುವು

Photo: PTI
ಹೊಸದಿಲ್ಲಿ, ನ.11: ಜಮ್ಮು-ಕಾಶ್ಮೀರ ಕ್ರಿಕೆಟ್ ತಂಡವು ಮಂಗಳವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅತಿಥೇಯ ದಿಲ್ಲಿ ತಂಡದ ವಿರುದ್ಧ 7 ವಿಕೆಟ್ ಗಳ ಅಂತರದಿಂದ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ. ರಣಜಿ ಟೂರ್ನಿಯಲ್ಲಿ ಇದೇ ಮೊದಲ ಬಾರಿ ದಿಲ್ಲಿ ಎದುರು ಜಮ್ಮು-ಕಾಶ್ಮೀರ ಜಯಭೇರಿ ಬಾರಿಸಿದೆ.
ಈ ಋತುವಿನ ರಣಜಿಯಲ್ಲಿ ಎರಡನೇ ಗೆಲುವು ದಾಖಲಿಸಿರುವ ಜಮ್ಮು-ಕಾಶ್ಮೀರ ತಂಡವು ಎಲೈಟ್ ‘ಡಿ’ ಗುಂಪಿನ ಅಂಕಪಟ್ಟಿಯಲ್ಲಿ ಮುಂಬೈ ತಂಡದ ನಂತರ 2ನೇ ಸ್ಥಾನಕ್ಕೇರಿದೆ.
ಮೊದಲು ಬೌಲಿಂಗ್ ಆಯ್ದುಕೊಂಡಿದ್ದ ಜಮ್ಮು-ಕಾಶ್ಮೀರ ತಂಡವು ವೇಗದ ಬೌಲರ್ ಆಕಿಬ್ ನಬಿ(5-35), ವಂಶಜ್ ಶರ್ಮಾ(2-57)ಹಾಗೂ ಅಬಿದ್ ಮುಷ್ತಾಕ್(2-30)ಅವರ ಶಿಸ್ತುಬದ್ಧ ಬೌಲಿಂಗ್ ದಾಳಿಯ ನೆರವಿನಿಂದ ದಿಲ್ಲಿ ತಂಡವನ್ನು ಮೊದಲ ಇನಿಂಗ್ಸ್ ನಲ್ಲಿ 211 ರನ್ ಗೆ ನಿಯಂತ್ರಿಸಿತು.
ಇದಕ್ಕೆ ಉತ್ತರವಾಗಿ ಜಮ್ಮು-ಕಾಶ್ಮೀರ ತಂಡವು ಆರಂಭಿಕ ಹಿನ್ನಡೆ ಅನುಭವಿಸಿದ್ದರೂ ನಾಯಕ ಪರಾಸ್ ಡೋಗ್ರಾ(106 ರನ್,183 ಎಸೆತ) ಹಾಗೂ ಅಬ್ದುಲ್ ಸಮದ್(85 ರನ್,115 ಎಸೆತ)ಸಾಹಸದಿಂದ, ಕನ್ಹೈಯಾ ವಧ್ವಾನ್(47 ರನ್, 81 ಎಸೆತ)ಅಮೂಲ್ಯ ಕೊಡುಗೆಯ ನೆರವಿನಿಂದ ಒಟ್ಟು 310 ರನ್ ಕಲೆ ಹಾಕಿ 99 ರನ್ ಮುನ್ನಡೆ ಪಡೆಯುವಲ್ಲಿ ಶಕ್ತವಾಯಿತು.
ದಿಲ್ಲಿ ತಂಡ 2ನೇ ಇನಿಂಗ್ಸ್ ನಲ್ಲಿ ನಾಯಕ ಆಯುಷ್ ಬದೋನಿ(72 ರನ್, 73 ಎಸೆತ)ಹಾಗೂ ಆಯುಷ್ ದೊಸೆಜಾ(62 ರನ್, 88 ಎಸೆತ)ಅರ್ಧಶತಕಗಳ ಬಲದಿಂದ ಒಂದು ಹಂತದಲ್ಲಿ 5 ವಿಕೆಟ್ ಗಳ ನಷ್ಟಕ್ಕೆ 267 ರನ್ ಗಳಿಸಿತ್ತು. ಆದರೆ ಕೇವಲ 10 ರನ್ ಗೆ ಕೊನೆಯ 5 ವಿಕೆಟ್ ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡು 277 ರನ್ ಗಳಿಸಿ ಆಲೌಟಾಯಿತು. ಎಡಗೈ ಸ್ಪಿನ್ನರ್ ವಂಶಜ್ ಶರ್ಮಾ(6-68) ದಿಲ್ಲಿ ತಂಡದ ಕುಸಿತಕ್ಕೆ ಕಾರಣರಾದರು. ವಂಶಜ್ ತಾನಾಡಿದ ನಾಲ್ಕನೇ ಪಂದ್ಯದಲ್ಲಿ 3ನೇ ಬಾರಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದರು. ಜಮ್ಮು-ಕಾಶ್ಮೀರ ತಂಡವು ಗೆಲುವಿಗೆ 179 ರನ್ ಗುರಿ ಪಡೆಯುವಲ್ಲಿ ನೆರವಾದರು.
ನಾಲ್ಕನೇ ದಿನವಾದ ಮಂಗಳವಾರ ಜೀವನಶ್ರೇಷ್ಠ ಇನಿಂಗ್ಸ್(ಔಟಾಗದೆ 133 ರನ್, 147 ಎಸೆತ, 20 ಬೌಂಡರಿ, 3 ಸಿಕ್ಸರ್)ಆಡಿದ ಆರಂಭಿಕ ಆಟಗಾರ ಕಾಮ್ರಾನ್ ಇಕ್ಬಾಲ್ ಜಮ್ಮು-ಕಾಶ್ಮೀರ ತಂಡವು 43.3 ಓವರ್ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ 179 ರನ್ ಗಳಿಸಲು ನೆರವಾದರು. ದಿಲ್ಲಿ ವಿರುದ್ಧದ 43 ರಣಜಿ ಪಂದ್ಯಗಳಲ್ಲಿ ಮೊತ್ತ ಮೊದಲ ಗೆಲುವು ದಾಖಲಿಸಿ ಇತಿಹಾಸ ನಿರ್ಮಿಸಲು ಮಹತ್ವದ ಕೊಡುಗೆ ನೀಡಿದರು. ಈ ಗೆಲುವು ದಿಲ್ಲಿಯ ದಶಕಗಳ ಪ್ರಾಬಲ್ಯವನ್ನು ಮುರಿದಿದ್ದಲ್ಲದೆ, ಜಮ್ಮು-ಕಾಶ್ಮೀರ ತಂಡವು ದೇಶೀಯ ಕ್ರಿಕೆಟ್ ನಲ್ಲಿ ಶಕ್ತಿಯುತವಾಗಿ ಬೆಳೆಯುತ್ತಿರುವ ಸಂಕೇತವಾಗಿದೆ.
►ಸಂಕ್ಷಿಪ್ತ ಸ್ಕೋರ್
ದಿಲ್ಲಿ: 211 ಹಾಗೂ 277 ರನ್(ಬದೋನಿ 72, ದೋಸೆಜಾ62, ವಂಶಜ್ 6-68)
ಜಮ್ಮು-ಕಾಶ್ಮೀರ: 310 ಹಾಗೂ 179/3(ಕಾಮ್ರಾನ್ ಇಕ್ಬಾಲ್ ಔಟಾಗದೆ 133, ಹ್ರಿತಿಕ್ ಶೊಕೀನ್ 2-52)







