ಇತರ ಲೆಗ್ ಸ್ಪಿನ್ನರ್ ಗಳಿಗಿಂತ ರವಿ ಬಿಷ್ಣೋಯಿ ಶೈಲಿ ವಿಭಿನ್ನ: ಮುತ್ತಯ್ಯ ಮುರಳೀಧರನ್ ಶ್ಲಾಘನೆ

ಮುತ್ತಯ್ಯ ಮುರಳೀಧರನ್ (murali_800/instagram)
ಹೊಸದಿಲ್ಲಿ: ಇತ್ತೀಚೆಗೆ ಆಸ್ಟ್ರೇಲಿಯಾ ತಂಡದೆದುರು ಮುಕ್ತಾಯಗೊಂಡ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಒಟ್ಟು ಒಂಬತ್ತು ವಿಕೆಟ್ ಗಳಿಸಿ ಗಮನ ಸೆಳೆದಿರುವ 23 ವರ್ಷದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿಯನ್ನು ಶ್ರೀಲಂಕಾದ ದಂತಕತೆ ಬೌಲರ್ ಮುತ್ತಯ್ಯ ಮುರಳೀಧರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ರವಿ ಬಿಷ್ಣೋಯಿಯನ್ನು ಭಾರತದ ಬೌಲರ್ ಗಳಾದ ಅನಿಲ್ ಕುಂಬ್ಳೆ ಹಾಗೂ ರವಿಚಂದ್ರನ್ ಅವರಿಗೆ ಮುತ್ತಯ್ಯ ಮುರಳೀಧರ್ ಹೋಲಿಸಿದ್ದಾರಾದರೂ, ಅವರಿಬ್ಬರಿಗಿಂತ ಈ ಯುವ ಬೌಲರ್ ಹೇಗೆ ಭಿನ್ನ ಎಂಬುದನ್ನೂ ಹೇಳಿದ್ದಾರೆ.
“ಭಾರತ ತಂಡವು ಪ್ರತಿ ಪೀಳಿಗೆಯಲ್ಲೂ ಉತ್ತಮ ಸ್ಪಿನ್ ಬೌಲರ್ ಗಳನ್ನು ಹೊಂದಿದೆ. ಅನಿಲ್ ಕುಂಬ್ಳೆಯಿಂದ ರವಿಚಂದ್ರನ್ ಅಶ್ವಿನ್ ವರೆಗೆ ಹಾಗೂ ಇದೀಗ ಯುವ ಸ್ಪಿನ್ನರ್ ಗಳು ಬಂದಿದ್ದಾರೆ. ಆದರೆ, ರವಿ ಬಿಷ್ಣೋಯಿ ಯಾವುದೇ ಲೆಗ್ ಸ್ಪಿನ್ನರ್ ಗಿಂತ ವಿಭಿನ್ನವಾಗಿದ್ದಾರೆ. ಆತ ವೇಗವಾಗಿ ಬೌಲಿಂಗ್ ಮಾಡುತ್ತಾನೆ ಹಾಗೂ ಬಾಲ್ ತೀವ್ರ ಸ್ವರೂಪದಲ್ಲಿ ಉರುಳುವಂತೆ ಮಾಡುತ್ತಾನೆ. ಅಕ್ಷರ್ ಪಟೇಲ್ ಕೂಡಾ ಬಾಲ್ ಅನ್ನು ಬಹಳ ಸ್ಪಿನ್ ಮಾಡದಿದ್ದರೂ, ತುಂಬಾ ನಿಖರವಾಗಿ ಬೌಲಿಂಗ್ ಮಾಡುತ್ತಾರೆ” ಎಂದು ಜಿಯೊ ಸಿನಿಮಾದೊಂದಿಗಿನ ಮಾತುಕತೆಯಲ್ಲಿ ಮುತ್ತಯ್ಯ ಮುರಳೀಧರನ್ ಹೇಳಿದ್ದಾರೆ.
ಬ್ಯಾಟಿಂಗ್ ಸ್ನೇಹಿ ಪಿಚ್ ಗಳಲ್ಲೂ ರವಿ ಬಿಷ್ಣೋಯಿ ಅವರನ್ನು ಎದುರಿಸುವುದು ತುಸು ಕಷ್ಟ ಎಂದು ಆಸ್ಟ್ರೇಲಿಯಾ ನಾಯಕ ಮ್ಯಾಥ್ಯೂ ವೇಡ್ ಕೂಡಾ ಒಪ್ಪಿಕೊಂಡಿದ್ದಾರೆ.
ಇಲ್ಲಿಯವರೆಗೆ ರವಿ ಬಿಷ್ಣೋಯಿ 21 ಪಂದ್ಯಗಳಿಂದ 34 ವಿಕೆಟ್ ಗಳನ್ನು ಕಿತ್ತಿದ್ದಾರೆ.







