ಐಸಿಸಿಯಿಂದ ಭಾರತಕ್ಕೆ ಹೆಚ್ಚಿನ ಪಾಲು ಬರುವುದು ನ್ಯಾಯೋಚಿತವಾಗಿದೆ: ರವಿ ಶಾಸ್ತ್ರಿ

ರವಿ ಶಾಸ್ತ್ರಿ | PC : PTI
ಮುಂಬೈ: 2024-27ರ ಕ್ರಿಕೆಟ್ ಚಕ್ರದಲ್ಲಿ ತನ್ನ ವರಮಾನದ 38.5 ಶೇಕಡ ಭಾಗವನ್ನು ಭಾರತಕ್ಕೆ ಕೊಡುವ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ)ನಿರ್ಧಾರವನ್ನು ಮಾಜಿ ಭಾರತೀಯ ಕ್ರಿಕೆಟಿಗ ಹಾಗೂ ಮಾಜಿ ಪ್ರಧಾನ ಕೋಚ್ ರವಿ ಶಾಸ್ತ್ರಿ ಸಮರ್ಥಿಸಿಕೊಂಡಿದ್ದಾರೆ. ಕ್ರಿಕೆಟ್ ಮಂಡಳಿಗೆ ಭಾರತದ ಕೊಡುಗೆಯನ್ನು ಗಮನದಲ್ಲಿರಿಸಿದರೆ ಇದು ನ್ಯಾಯೋಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಐಸಿಸಿಯಿಂದ ವಾರ್ಷಿಕ 1,968 ಕೋಟಿ ರೂ. ಪಡೆಯಲಿದೆ. ಇದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ 6.89 ಶೇಕಡ ಮತ್ತು ಕ್ರಿಕೆಟ್ ಆಸ್ಟ್ರೇಲಿಯದ 6.25 ಶೇಕಡ ಪಾಲಿಗಿಂತ ಸುಮಾರು ಆರು ಪಟ್ಟು ಹೆಚ್ಚಾಗಿದೆ.
2023ರಲ್ಲಿ ಘೋಷಿಸಲಾಗಿರುವ ಆದಾಯ ವಿತರಣಾ ಮಾದರಿಯು ಕ್ರಿಕೆಟ್ ಜಗತ್ತಿನಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಅಸಮಾನ ಪಾಲು ವಿತರಣೆಯ ಬಗ್ಗೆ ಕೆಲವು ದೇಶಗಳ ಕ್ರಿಕೆಟ್ ಮಂಡಳಿಗಳು ಆತಂಕ ವ್ಯಕ್ತಪಡಿಸಿವೆ. ಆದಾಯದ ಉಳಿದ 12 ಶೇಕಡವನ್ನು ಇತರ 9 ಕ್ರಿಕೆಟ್ ಆಡುವ ದೇಶಗಳಿಗೆ ಹಂಚಲಾಗಿದೆ.
ಆದಾಯ ಹಂಚಿಕೆಯು ಆದಾಯ ಸೃಷ್ಟಿಗೆ ಅನುಗುಣವಾಗಿರಬೇಕು ಎಂದು ಶಾಸ್ತ್ರಿ ಹೇಳಿದ್ದಾರೆ. ಭಾರತವು ಟೆಲಿವಿಶನ್ ಹಕ್ಕುಗಳು ಮತ್ತು ಸರಣಿಗಳ ಆದಾಯಗಳ ಮೂಲಕ ಕ್ರಿಕೆಟ್ನ ಜಾಗತಿಕ ಸಂಪಾದನೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡುತ್ತದೆ ಎಂಬುದಾಗಿ ಅವರು ಬೆಟ್ಟು ಮಾಡಿದ್ದಾರೆ.
‘‘ಭಾರತಕ್ಕೆ ಹೆಚ್ಚಿನ ಪಾಲು ಸಿಗಬೇಕೆಂದು ನಾನು ಬಯಸುತ್ತೇನೆ. ಯಾಕೆಂದರೆ ಐಸಿಸಿಗೆ ಬರುವ ಹೆಚ್ಚಿನ ಹಣವು ಭಾರತದಿಂದ ಬರುತ್ತದೆ. ಹಾಗಾಗಿ, ಅವರಿಗೆ ವರಮಾನದಲ್ಲಿ ಹೆಚ್ಚಿನ ಪಾಲು ಸಿಗುವುದು ನ್ಯಾಯೋಚಿತವಾಗಿದೆ. ಭಾರತವನ್ನೊಳಗೊಂಡ ಸರಣಿಗಳಿಗೆ ಟಿವಿ ಹಕ್ಕುಗಳಿಂದ ಬರುವ ಆದಾಯವನ್ನು ನೋಡಿ. ಹಾಗಾಗಿ, ಭಾರತಕ್ಕೆ ಅದರ ಕೊಡುಗೆಗೆ ತಕ್ಕಷ್ಟು ವರಮಾನ ಸಿಗುವುದು ಸರಿಯಾಗಿದೆ’’ ಎಂದು ‘ವಿಸ್ಡನ್’ಗೆ ನೀಡಿರುವ ಸಂದರ್ಶನವೊಂದರಲ್ಲಿ ರವಿ ಶಾಸ್ತ್ರಿ ಹೇಳಿದ್ದಾರೆ.







