ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿದ್ದನ್ನು ಟೀಕಿಸಿದ ರವಿ ಶಾಸ್ತ್ರಿ

ರವಿ ಶಾಸ್ತ್ರಿ , ಜಸ್ಪ್ರಿತ್ ಬುಮ್ರಾ | PTI
ಹೊಸದಿಲ್ಲಿ: ಇಂಗ್ಲೆಂಡ್ ತಂಡದ ವಿರುದ್ಧ ನಿರ್ಣಾಯಕ 2ನೇ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡಿರುವ ಪ್ರಸಕ್ತ ಭಾರತೀಯ ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
‘‘ನಿಮ್ಮಲ್ಲಿ ವಿಶ್ವ ಶ್ರೇಷ್ಠ ವೇಗದ ಬೌಲರ್ ಇದ್ದಾರೆ. ಏಳು ದಿನಗಳ ವಿಶ್ರಾಂತಿಯ ನಂತರ ಅವರನ್ನು 2ನೇ ಟೆಸ್ಟ್ ಪಂದ್ಯದಿಂದ ಹೊರಗಿಡುತ್ತೀರಿ. ಇದನ್ನು ನಿಜವಾಗಿಯೂ ನಂಬಲು ಕಷ್ಟವಾಗುತ್ತಿದೆ’’ ಎಂದು ಸ್ಕೈ ಕ್ರಿಕೆಟ್ ಗೆ ಶಾಸ್ತ್ರಿ ಹೇಳಿದ್ದಾರೆ.
ಕೋಚ್ ಗೌತಮ್ ಗಂಭೀರ್ ಹೆಸರನ್ನು ಉಲ್ಲೇಖಿಸದೆ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡವು ಇತ್ತೀಚೆಗೆ ಸತತ ಸೋಲಿನಿಂದ ಬಳಲುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿದರು.
‘‘ಭಾರತದ ಇತ್ತೀಚೆಗಿನ ಪ್ರದರ್ಶನವನ್ನು ನೋಡಿದರೆ ಈ ಟೆಸ್ಟ್ ಪಂದ್ಯವು ಅತ್ಯಂತ ಮುಖ್ಯವಾಗಿದೆ. ಭಾರತ ತಂಡವು ನ್ಯೂಝಿಲ್ಯಾಂಡ್ ವಿರುದ್ಧ 3 ಟೆಸ್ಟ್ ಪಂದ್ಯಗಳನ್ನು ಸೋತಿದೆ. ಆಸ್ಟ್ರೇಲಿಯದ ವಿರುದ್ಧ 3 ಪಂದ್ಯಗಳನ್ನು ಕಳೆದುಕೊಂಡಿದೆ. ಪ್ರಸಕ್ತ ಸರಣಿಯಲ್ಲಿ ಮೊದಲ ಪಂದ್ಯವನ್ನು ಸೋತಿದೆ. ನಮಗೆ ಗೆಲುವಿನ ಹಾದಿಗೆ ಮರಳಲು ದಾರಿ ಕಾಣದಾಗಿದೆ’’ ಎಂದು ಶಾಸ್ತ್ರಿ ಹೇಳಿದರು.
ಭಾರತದ ಶ್ರೇಷ್ಠ ಬೌಲರ್ ಆಗಿರುವ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಬದಲಿಗೆ ಈ ವರ್ಷ ಮೊದಲ ಟೆಸ್ಟ್ ಪಂದ್ಯ ಆಡಲಿರುವ ಆಕಾಶ್ ದೀಪ್ ಗೆ ಅವಕಾಶ ನೀಡಲಾಗಿದೆ. ಬೌಲಿಂಗ್ ಆಲ್ ರೌಂಡರ್ ಶಾರ್ದುಲ್ ಠಾಕೂರ್ ಬದಲಿಗೆ ಬ್ಯಾಟಿಂಗ್ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಆಡಲಿದ್ದಾರೆ.







